ಉಡುಪಿ : ಗ್ರಾಮ ಆಡಳಿತಾಧಿಕಾರಿಗೆ ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ತಂದೆ-ಮಗನನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಪಳ್ಳಿ ಸುಲೇಮಾನ್ ಹಾಗೂ ಶಫಿ ಅವರನ್ನು ಬಂಧಿಸಿದೆ.

ಜುಲೈ 15ರಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಗುಲ್ವಾಡಿ ಗ್ರಾಮ ಪಂಚಾಯತ್‌ನ ಗ್ರಾಮ ಆಡಳಿತಾಧಿಕಾರಿ ಕಚೇರಿಯಲ್ಲಿ ಗ್ರಾಮ ಆಡಳಿತಾಧಿಕಾರಿ ಪ್ರಕಾಶ್ ನಾಯ್ಕ್ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಗುಲ್ವಾಡಿ ನಿವಾಸಿಗಳಾದ ಪಳ್ಳಿ ಸುಲೇಮಾನ್ ಹಾಗೂ ಅವರ ಪುತ್ರ ಶಫಿ ಎಸ್‌ಐಆರ್ ಅರ್ಜಿ ಸಲ್ಲಿಸಲು ಕಚೇರಿಗೆ ಬಂದಿದ್ದರು. ಈ ವೇಳೆ ಅರ್ಜಿಯನ್ನು ತಮ್ಮ ಬಳಿ ನೀಡುವಂತೆ ಗ್ರಾಮ ಆಡಳಿತಾಧಿಕಾರಿ ತಿಳಿಸಿದಾಗ, ಇಬ್ಬರೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಲ್ಲದೆ ಜಾತಿ ನಿಂದನೆ ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆಯ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕುಂದಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನ ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಎ. ಕಾಯ್ಕಿಣಿ ಅವರ ನೇತೃತ್ವದಲ್ಲಿ, ಪೊಲೀಸ್ ಉಪನಿರೀಕ್ಷಕರಾದ ನಿರಂಜನ್ ಗೌಡ ಮತ್ತು ಚಂದ್ರಕಲಾ ಎಂ. ಪತ್ತಾರ ಅವರ ತಂಡ ಜುಲೈ 16ರಂದು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.


