Monday, June 29, 2026

spot_img

ಯಕ್ಷಗಾನ ಕಲಾರಂಗದ 100ನೇ ಮನೆ ಹಸ್ತಾಂತರ

ಉಡುಪಿ : ಯಕ್ಷಗಾನ ಕಲಾರಂಗದ ಸಮಾಜಮುಖಿ ಸೇವಾ ಯೋಜನೆಯಡಿ ನಿರ್ಮಿಸಲಾದ 100ನೇ ಮನೆಯನ್ನು ವಿದ್ಯಾಪೋಷಕ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿಂಚನಾ (ಶಕುಂತಲಾ ಮತ್ತು ಶಿವ ಅವರ ಪುತ್ರಿ) ಅವರಿಗೆ ಹಸ್ತಾಂತರಿಸಲಾಯಿತು. ಎಲ್ಲಾ ಫಲಾನುಭವಿಗಳ ಪ್ರಾಯೋಜಕತ್ವದಲ್ಲಿ ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ‘ಶತಸ್ಮೃತಿ’ ಹೆಸರಿನ ನೂತನ ಮನೆಯ ಉದ್ಘಾಟನೆ ನೆರವೇರಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಪರ್ಯಾಯ ಶಿರೂರು ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ ಅವರು, ಅನ್ನದಾನ ಶ್ರೇಷ್ಠವಾದರೂ ಅದಕ್ಕಿಂತಲೂ ಶ್ರೇಷ್ಠವಾದುದು ವಿದ್ಯಾದಾನ ಎಂದು ಹೇಳಿದರು. ಅನ್ನವು ಕ್ಷಣಿಕ ತೃಪ್ತಿಯನ್ನು ನೀಡಿದರೆ, ವಿದ್ಯೆ ಬದುಕಿನ ದಾರಿಯನ್ನು ತೋರಿಸುತ್ತದೆ. ಯಕ್ಷಗಾನ ಕಲಾರಂಗವು ವಿದ್ಯಾದಾನದೊಂದಿಗೆ ವಿದ್ಯಾರ್ಥಿಗಳಿಗೆ ಸುರಕ್ಷಿತ ನೆಲೆ ಕಲ್ಪಿಸುವ ಉದ್ದೇಶದಿಂದ ಮನೆ ನಿರ್ಮಿಸಿ ಆಶ್ರಯದಾನ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀಕೃಷ್ಣನ ಪ್ರಸಾದ ನೀಡಿ, ಕಲಾರಂಗದ ಸೇವಾ ಕಾರ್ಯ ಇನ್ನಷ್ಟು ವಿಸ್ತಾರವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಯಕ್ಷಗಾನ ಕಲಾರಂಗದ ಸೇವಾ ಚಟುವಟಿಕೆಗಳು ಸಮಾಜಕ್ಕೆ ಮಾದರಿಯಾಗಿವೆ. ತಮ್ಮ ವಿಕಾಸ ಸೇವಾ ಟ್ರಸ್ಟ್ ಮೂಲಕವೂ ಇದೇ ರೀತಿಯ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಕಲಾರಂಗದ ಶಿಸ್ತು, ಸಮಯಪ್ರಜ್ಞೆ ಹಾಗೂ ಕಾರ್ಯವೈಖರಿ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗಾಂಧಿ ಆಸ್ಪತ್ರೆಯ ಎಂ.ಡಿ. ಡಾ. ಹರಿಶ್ಚಂದ್ರ, ಬೆಂಗಳೂರು ಟೆಕ್ಸೆಲ್ ಪ್ರೈವೇಟ್ ಲಿಮಿಟೆಡ್‌ನ ಎಂ.ಡಿ. ಹರೀಶ್ ರಾಯ್ಸ್, ಕೆ. ಸದಾಶಿವ ಭಟ್, ವಿಲಾಸಿನಿ ಬಾಬುರಾಯ ಶೆಣೈ, ಶಿವ ಎಲೆಕ್ಟ್ರಿಕಲ್ಸ್‌ನ ಶ್ರೀನಿವಾಸ ಹೆಬ್ಬಾರ್, ಡಾ. ಭಾಗರ್ವಿ ಆಠಾಳ್, ಶ್ರೀಮತಿ ಉಮಾ, ಶ್ರೀಮತಿ ರೂಪಾ ಹರೀಶ್, ಡಾ. ರಾಮಚಂದ್ರ ಆಠಾಳ್, ಯು. ಶ್ರೀಧರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಯಕ್ಷಗಾನ ಕಲಾರಂಗದ ನಿಕಟಪೂರ್ವ ಅಧ್ಯಕ್ಷ ಕೆ. ಗಣೇಶ್ ರಾವ್, ಉಪಾಧ್ಯಕ್ಷರಾದ ಎಸ್.ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಸದಸ್ಯರು ಹಾಗೂ ಅನೇಕ ಕಲಾವಿದರು, ಶಿಕ್ಷಕರು, ದಾನಿಗಳು ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles