ಉಡುಪಿ : ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜೂನ್ 30ರಿಂದ ಜುಲೈ 6ರವರೆಗೆ ಕರಾವಳಿ ಭಾಗಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮನವಿ ಮಾಡಿದ್ದಾರೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ಸೂಚನೆಗಳ ಪ್ರಕಾರ, ಮಳೆ, ಗಾಳಿ ಹಾಗೂ ಸಿಡಿಲಿನ ಸಂದರ್ಭದಲ್ಲಿ ಸಾರ್ವಜನಿಕರು, ಮಕ್ಕಳು ಮತ್ತು ಕಾರ್ಮಿಕರು ಹೊರಗಡೆ ಸಂಚರಿಸದೆ ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯಬೇಕು. ಕೃಷಿಕರು ಸಹ ಮಳೆ ಹಾಗೂ ಸಿಡಿಲಿನ ವೇಳೆ ಕೃಷಿ ಚಟುವಟಿಕೆಗಳಿಂದ ದೂರವಿರಬೇಕು. ಪ್ರವಾಸಿಗರು, ಸಾರ್ವಜನಿಕರು ಮತ್ತು ಮೀನುಗಾರರು ನದಿ, ಜಲಾಶಯ ಹಾಗೂ ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಪಾಯಕಾರಿ ಮರಗಳು, ವಿದ್ಯುತ್ ಕಂಬಗಳು ಹಾಗೂ ತುಂಡಾದ ವಿದ್ಯುತ್ ತಂತಿಗಳ ಸಮೀಪ ಹೋಗಬಾರದು. ಹಳೆಯ ಅಥವಾ ದುರ್ಬಲ ಕಟ್ಟಡಗಳ ಬಳಿ ಹಾಗೂ ಮರಗಳ ಕೆಳಗೆ ನಿಲ್ಲುವುದನ್ನು ತಪ್ಪಿಸಬೇಕು. ಕಟ್ಟಡಗಳ ಮೇಲೆ ಅಪಾಯಕಾರಿಯಾಗಿ ತೂಗುತ್ತಿರುವ ಕೊಂಬೆಗಳನ್ನು ಮುಂಚಿತವಾಗಿ ತೆರವುಗೊಳಿಸಬೇಕು ಎಂದು ಸೂಚಿಸಲಾಗಿದೆ.

ನಿರಂತರ ಮಳೆಯಿಂದ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವ ಪ್ರದೇಶಗಳ ನಿವಾಸಿಗಳು ಅಗತ್ಯವಿದ್ದರೆ ತಹಶೀಲ್ದಾರ್ ಕಚೇರಿ ಅಥವಾ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಸಂಪರ್ಕಿಸಿ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರವಾಗುವಂತೆ ಸಲಹೆ ನೀಡಲಾಗಿದೆ. ಮುಂದಿನ ಏಳು ದಿನಗಳ ಕಾಲ ಬಲವಾದ ಗಾಳಿ ಹಾಗೂ ಮಳೆಯ ಸಾಧ್ಯತೆ ಇರುವುದರಿಂದ ದುರ್ಬಲ ಕಟ್ಟಡಗಳಲ್ಲಿ ವಾಸಿಸುವವರು ಮುನ್ನೆಚ್ಚರಿಕೆಯಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ತುರ್ತು ಪರಿಸ್ಥಿತಿಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ನಿಯಂತ್ರಣ ಕೊಠಡಿಯ ಶುಲ್ಕರಹಿತ ಸಹಾಯವಾಣಿ 1077 ಅಥವಾ 0820-2574802 ಸಂಖ್ಯೆಗೆ ಸಂಪರ್ಕಿಸಬಹುದು. ಅಲ್ಲದೆ ಸಂಬಂಧಿತ ತಹಶೀಲ್ದಾರ್ ಕಚೇರಿ ಅಥವಾ ಉಡುಪಿ ನಗರಸಭೆ ಸಹಾಯವಾಣಿಯನ್ನೂ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


