ಉಡುಪಿ : ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆಗೆ ವ್ಯಕ್ತವಾಗಿರುವ ವಿರೋಧ ಅನಗತ್ಯವಾಗಿದ್ದು, ಕಂಬಳವು ಕರಾವಳಿಗೆ ಮಾತ್ರ ಸೀಮಿತವಾಗಿರುವ ಕ್ರೀಡೆಯಲ್ಲ, ಇಡೀ ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆಯಾಗಿದೆ ಎಂದು ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ದಸರಾ ರಾಜ್ಯದ ನಾಡಹಬ್ಬವಾಗಿದ್ದು, ಆ ನಾಡಹಬ್ಬದಲ್ಲಿ ಕಂಬಳ ಆಯೋಜಿಸಿದರೆ ತಪ್ಪೇನಿಲ್ಲ. ಕಂಬಳವು ರಾಜ್ಯದ ಘನತೆ ಮತ್ತು ಗೌರವವನ್ನು ಹೆಚ್ಚಿಸುವ ಕ್ರೀಡೆಯಾಗಿದ್ದು, ಸರ್ಕಾರವೂ ಕಂಬಳಕ್ಕೆ ಅಧಿಕೃತ ಕ್ರೀಡೆಯ ಮಾನ್ಯತೆ ನೀಡಿದೆ. ರಾಜ್ಯದ ಯಾವುದೇ ಭಾಗದಲ್ಲಿ ಕಂಬಳ ಆಯೋಜಿಸಬಹುದೆಂದು ಹೈಕೋರ್ಟ್ ತೀರ್ಪು ನೀಡಿದ್ದು, ಕಂಬಳ ಅಸೋಸಿಯೇಷನ್ ಕೂಡ ಕಾರ್ಯನಿರ್ವಹಿಸುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಮಾತ್ರವಲ್ಲದೆ ಕಾಸರಗೋಡಿನಲ್ಲೂ ಕಂಬಳ ನಡೆಯುತ್ತಿದ್ದು, ಇದು ಯಾವುದೇ ವ್ಯಕ್ತಿ, ಪಕ್ಷ ಅಥವಾ ಧರ್ಮಕ್ಕೆ ಸೀಮಿತವಾದ ಕ್ರೀಡೆಯಲ್ಲ ಎಂದರು.

ಕಂಬಳವು ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ರೈತರ ಕ್ರೀಡೆಯಾಗಿದೆ. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದವರೂ ಕಂಬಳದ ಕೋಣಗಳನ್ನು ಸಾಕುತ್ತಿದ್ದಾರೆ. ಎಲ್ಲ ವರ್ಗದ ಜನರು ಕಂಬಳವನ್ನು ಪ್ರೀತಿಸುತ್ತಿದ್ದು, ಇದರಲ್ಲಿ ಶೋಷಣೆಗೆ ಅವಕಾಶವೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಕಂಬಳದಿಂದ ಸಂಪ್ರದಾಯ ಮತ್ತು ಸಂಸ್ಕೃತಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಮೈಸೂರು ಮತ್ತು ಕರಾವಳಿ ಸಂಸ್ಕೃತಿಗಳ ನಡುವೆ ಯಾವುದೇ ಸಂಘರ್ಷವಿಲ್ಲ. ಮೈಸೂರು ಅರಸರ ಕಾಲದಲ್ಲಿಯೂ ಕಂಬಳಕ್ಕೆ ಪ್ರೋತ್ಸಾಹ ದೊರೆತಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಕಂಬಳಕ್ಕೆ ಸಾಕಷ್ಟು ಸಹಕಾರ ನೀಡಿದ್ದರು. ಬಾರ್ಕೂರು ಸಂಸ್ಥಾನ ಸೇರಿದಂತೆ ಅರಮನೆಗಳ ವ್ಯಾಪ್ತಿಯಲ್ಲೂ ಕಂಬಳ ನಡೆದ ಇತಿಹಾಸವಿದೆ ಎಂದು ಹೇಳಿದರು.

ಕಂಬಳದ ಕೋಣಗಳ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಕೋಣಗಳನ್ನು ಸ್ವಂತ ಮಕ್ಕಳಿಗಿಂತಲೂ ಹೆಚ್ಚಿನ ಪ್ರೀತಿ ಮತ್ತು ಆರೈಕೆಯಿಂದ ಸಾಕಲಾಗುತ್ತದೆ. ವರ್ಷದಲ್ಲಿ ಸುಮಾರು 90 ದಿನ ಮಾತ್ರ ಅವುಗಳನ್ನು ಕಂಬಳದಲ್ಲಿ ಓಡಿಸಲಾಗುತ್ತದೆ. ಉಳಿದ ಅವಧಿಯಲ್ಲಿ ಅವುಗಳ ಆರೈಕೆ, ಆಹಾರ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು. ಕಂಬಳವು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ವೀರಸಾಹಸ ಕ್ರೀಡೆಯಾಗಿದೆ. ಪರಿಸರಕ್ಕೂ ಯಾವುದೇ ಹಾನಿಯಾಗುವುದಿಲ್ಲ. ಇದಕ್ಕೆ ಹೆಚ್ಚಿನ ವೆಚ್ಚ ಅಥವಾ ಭವ್ಯ ಸಿದ್ಧತೆಯ ಅಗತ್ಯವಿಲ್ಲ. ಸರ್ಕಾರಕ್ಕೆ ತೊಂದರೆಯಾಗದಂತೆ ದಾನಿಗಳ ಸಹಕಾರದಿಂದಲೂ ಕಂಬಳ ಆಯೋಜಿಸಲು ನಾವು ಸಿದ್ಧ ಎಂದು ಹೇಳಿದರು.

ಬೆಂಗಳೂರು ಅರಮನೆ ಮೈದಾನದಲ್ಲಿಯೂ ಯಶಸ್ವಿಯಾಗಿ ಕಂಬಳ ಆಯೋಜಿಸಲಾಗಿದ್ದು, ಅರಮನೆಯವರೇ ಅವಕಾಶ ನೀಡಿದ್ದರು. ಮಂಗಳೂರು ದಸರಾದಲ್ಲಿ ಕುಸ್ತಿ ಸೇರಿದಂತೆ ಇತರ ಭಾಗಗಳ ಕ್ರೀಡೆಗಳಿಗೆ ಅವಕಾಶ ನೀಡುವಂತೆ, ಮೈಸೂರು ದಸರಾದಲ್ಲೂ ಕಂಬಳವನ್ನು ಸ್ವಾಗತಿಸಬೇಕು ಎಂದು ಮನವಿ ಮಾಡಿದ ಅವರು, ಕಂಬಳವನ್ನು ವಿರೋಧಿಸುವ ಬದಲು ಅದರ ಸಂಪ್ರದಾಯ, ಇತಿಹಾಸ ಮತ್ತು ಮಹತ್ವವನ್ನು ಅರಿತುಕೊಳ್ಳುವಂತೆ ಕರೆ ನೀಡಿದರು.


