Wednesday, July 8, 2026

spot_img

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ವೈಜ್ಞಾನಿಕ ಅಣಬೆ ಕೃಷಿ ಮಾಹಿತಿ ಕಾರ್ಯಾಗಾರ

ಉಡುಪಿ : ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ), ಬ್ರಹ್ಮಾವರ ಹಾಗೂ ಅಥರ್ವ ನ್ಯಾಚುರಲ್ ಫಾರ್ಮ್ ಸಹಯೋಗದಲ್ಲಿ ಬುಧವಾರ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವೈಜ್ಞಾನಿಕ ಅಣಬೆ ಕೃಷಿ ಮಾಹಿತಿ ಕಾರ್ಯಾಗಾರ ಹಾಗೂ ಪ್ರಾಯೋಗಿಕ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ರೇವಣ್ಣ ರೇವಣ್ಣವರ ಉದ್ಘಾಟಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ಅಣಬೆ ಸೇವನೆಗೆ ಉತ್ತಮ ಬೇಡಿಕೆಯಿದ್ದು, ಇಲ್ಲಿನ ಹವಾಮಾನ ಅಣಬೆ ಕೃಷಿಗೆ ಅತ್ಯಂತ ಅನುಕೂಲಕರವಾಗಿದೆ. ರೈತರು ಮತ್ತು ಆಸಕ್ತರು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡು ಸಣ್ಣ ಪ್ರಮಾಣದಲ್ಲಿ ಅಣಬೆ ಕೃಷಿ ಆರಂಭಿಸಿದರೆ ಉತ್ತಮ ಆದಾಯ ಗಳಿಸಬಹುದೆಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನ ವಿಭಾಗದ ವಿಜ್ಞಾನಿ ಕಿರಣ್ ಕುಮಾರ್ ಎನ್. ಪ್ರಾಸ್ತಾವಿಕವಾಗಿ ಮಾತನಾಡಿ, ಅಣಬೆ ಕೃಷಿ ಕೇವಲ ಪೌಷ್ಟಿಕ ಆಹಾರ ಉತ್ಪಾದನೆಗೆ ಮಾತ್ರ ಸೀಮಿತವಾಗಿಲ್ಲ, ಇದು ಉತ್ತಮ ಸ್ವಯಂ ಉದ್ಯೋಗದ ಅವಕಾಶವನ್ನೂ ಕಲ್ಪಿಸುವ ಉದ್ಯಮವಾಗಿದೆ ಎಂದು ಹೇಳಿದರು.  ಭಾಗವಹಿಸಿದ ರೈತರು ಮತ್ತು ಆಸಕ್ತರಿಗೆ ಅಣಬೆ ಬೆಳೆಯುವ ವಿವಿಧ ವಿಧಾನಗಳು, ನಿರ್ವಹಣೆ ಹಾಗೂ ಮಾರುಕಟ್ಟೆ ಅವಕಾಶಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥೆ ಡಾ. ಭೂಮಿಕಾ ಎಚ್.ಆರ್. ಮಾತನಾಡಿ, ಅಣಬೆ ಅತ್ಯಧಿಕ ಪ್ರೋಟೀನ್ ಹೊಂದಿರುವ ಪೌಷ್ಟಿಕ ಆಹಾರವಾಗಿದ್ದು, ವಿವಿಧ ತಳಿಯ ಅಣಬೆಗಳನ್ನು ವೈಜ್ಞಾನಿಕವಾಗಿ ಬೆಳೆಯುವ ಮೂಲಕ ರೈತರು ಹೆಚ್ಚುವರಿ ಆದಾಯ ಗಳಿಸಬಹುದು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬ್ರಹ್ಮಾವರ ಡಿಪ್ಲೊಮಾ ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ರವಿರಾಜ್ ಶೆಟ್ಟಿ ಜಿ. ಮಾತನಾಡಿ, ಅಣಬೆ ಕೃಷಿ ಕಡಿಮೆ ಜಾಗದಲ್ಲಿ, ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಲಾಭದಾಯಕ ಕೃಷಿ ಚಟುವಟಿಕೆಯಾಗಿದೆ. ಮನೆಯ ಸಣ್ಣ ಜಾಗವನ್ನೂ ಸಮರ್ಪಕವಾಗಿ ಬಳಸಿಕೊಂಡು ಅಣಬೆ ಕೃಷಿ ಕೈಗೊಳ್ಳುವ ಮೂಲಕ ರೈತರು ಹಾಗೂ ಯುವಕರು ಸ್ವಾವಲಂಬಿಗಳಾಗಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಣಬೆ ಬೆಳೆಯುವ ವೈಜ್ಞಾನಿಕ ವಿಧಾನಗಳು, ಬೀಜ ತಯಾರಿಕೆ, ನಿರ್ವಹಣೆ ಹಾಗೂ ಕೊಯ್ಲಿನ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಕೃಷಿ ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಸದಾನಂದ ಆಚಾರ್ಯ ಬಿ. ನಿರೂಪಿಸಿ, ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles