Wednesday, November 25, 2026

spot_img

ಭತ್ತದ ಬೇಸಾಯ ವಿಸ್ತರಣೆಗೆ 25 ಲಕ್ಷ ರೂ. ನೆರವು ಕೇಳಿ ನಿರಾಕರಿಸಿದ್ದಕ್ಕೆ ಹಲ್ಲೆ, ಚಿನ್ನದ ಸರ ದರೋಡೆ

ಉಡುಪಿ: ಭತ್ತದ ಬೇಸಾಯವನ್ನು ವಿಸ್ತರಿಸಲು 25 ಲಕ್ಷ ರೂ. ಹಣದ ನೆರವು ನೀಡುವಂತೆ ಕೇಳಿ ನಿರಾಕರಿಸಿದ ವ್ಯಕ್ತಿಯ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ, ಸುಮಾರು 4.50 ಲಕ್ಷ ರೂ. ಮೌಲ್ಯದ ಚಿನ್ನದ ಸರಗಳನ್ನು ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ. ನ.24ರಂದು ಕುರ್ಕಾಲು ಗ್ರಾಮದ ಕುಂಜಾರುಗಿರಿ ದುರ್ಗಾದೇವಿ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಪಿರ್ಯಾದಿದಾರರಾದ ಬಿ. ರಾಜಮೂರ್ತಿ ಭಟ್ (68) ಅವರು ದೀಪೋತ್ಸವಕ್ಕೆ ತೆರಳಿದ್ದ ಸಂದರ್ಭದಲ್ಲಿ ಪರಿಚಯದ ಮುರಳಿಕೃಷ್ಣ ಎಂಬಾತ ರಾತ್ರಿ ಸುಮಾರು 8.30ರ ವೇಳೆಗೆ ಅವರ ಬಳಿ ಬಂದು ಮಾತನಾಡುವುದಿದೆ ಎಂದು ಹೇಳಿ ದೇವಸ್ಥಾನದಿಂದ ಹೊರಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ತನ್ನ ಕಾರಿನಲ್ಲಿ ಕೂರಿಸಿ, ತಾನು ಸುಮಾರು 60 ಎಕರೆ ಜಮೀನಿನಲ್ಲಿ ಭತ್ತದ ಬೇಸಾಯ ಮಾಡುತ್ತಿದ್ದು, ಅದನ್ನು 200 ಎಕರೆಗೆ ವಿಸ್ತರಿಸಲು 25 ಲಕ್ಷ ರೂ. ಹಣದ ಅವಶ್ಯಕತೆಯಿದೆ. ಹಣದ ನೆರವು ನೀಡುವಂತೆ ಕೇಳಿದ್ದಾನೆ.

ರಾಜಮೂರ್ತಿ ಭಟ್ ಅವರು ಹಣ ನೀಡಲು ನಿರಾಕರಿಸಿದಾಗ, ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳನ್ನು ದೋಚುವ ಉದ್ದೇಶದಿಂದ ಕಾರಿನೊಳಗೆ ಸುತ್ತಿಗೆಯಿಂದ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ್ದಾನೆ. ಬಳಿಕ ಅವರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬೆನ್ನಟ್ಟಿ ದೂಡಿ, ಸುಮಾರು 20 ಗ್ರಾಂ ತೂಕದ ಚಿನ್ನದ ಸರ ಹಾಗೂ 28 ಗ್ರಾಂ ತೂಕದ ತುಳಸಿ ಮಣಿಗಳಿರುವ ಚಿನ್ನದ ಸರವನ್ನು ಕಿತ್ತುಕೊಂಡು ಕಾರು ಸಮೇತ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಳವಾದ ಎರಡು ಚಿನ್ನದ ಸರಗಳ ಒಟ್ಟು ಅಂದಾಜು ಮೌಲ್ಯ 4.50 ಲಕ್ಷ ರೂ. ಆಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ಶಿರ್ವ ಪೊಲೀಸರು ಆರೋಪಿ ಮುರಳಿಕೃಷ್ಣ ಉಪಾಧ್ಯಾಯ (47), ಪಡುಬೆಳ್ಳೆ ಗ್ರಾಮದ ನಿವಾಸಿಯನ್ನು ನ.25ರಂದು ಬಂಧಿಸಿದ್ದಾರೆ. ಬಂಧಿತನಿಂದ ತುಳಸಿ ಮಣಿಗಳಿರುವ ತುಂಡಾದ ಚಿನ್ನದ ಸರ ಅಂದಾಜು ಮೌಲ್ಯ 1.90 ಲಕ್ಷ ರೂ., ತುಂಡಾದ ಹವಳದ ಚಿನ್ನದ ಸರ ಅಂದಾಜು ಮೌಲ್ಯ 2.60 ಲಕ್ಷ ರೂ. ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles