ಉಡುಪಿ : ಕಡಿಮೆ ಬಡ್ಡಿದರದಲ್ಲಿ ಚಿನ್ನದ ಅಡಮಾನ ಸಾಲ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಚಿನ್ನ ಪಡೆದು, ಸಾಲದ ಅವಧಿ ಮುಗಿದರೂ ಅಸಲಿ ಚಿನ್ನವನ್ನು ಹಿಂತಿರುಗಿಸದೆ ವಂಚಿಸಿರುವ ಆರೋಪದಡಿ ಐವರ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2025ರಲ್ಲಿ ಕುಂದಾಪುರ ತಾಲೂಕು ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ಅಪೇಕ್ಷಾ ಕಾಂಪ್ಲೆಕ್ಸ್‌ನಲ್ಲಿ ಆರೋಪಿಗಳು ಪಿಬಿಸಿ ಜ್ಯುವೆಲ್ಲರ್ಸ್ ಗೋಲ್ಡ್ ಲೋನ್ ಎಂಬ ಶಾಖೆಯನ್ನು ತೆರೆದಿದ್ದರು. ಅತೀ ಕಡಿಮೆ ಬಡ್ಡಿದರದಲ್ಲಿ ಚಿನ್ನ ಅಡವಿರಿಸಿಕೊಂಡು ಸಾಲ ನೀಡುವುದಾಗಿ ಸಾರ್ವಜನಿಕರಿಗೆ ಆಮಿಷವೊಡ್ಡಿದ್ದರು ಎನ್ನಲಾಗಿದೆ.

ಇದನ್ನು ನಂಬಿದ ತ್ರಾಸಿ ಗ್ರಾಮದ ವೆಂಕಟೇಶ ಪೈ (48) ಸೇರಿದಂತೆ ಹಲವು ಮಂದಿ ತಮ್ಮ ಚಿನ್ನಾಭರಣಗಳನ್ನು ಸಂಸ್ಥೆಯಲ್ಲಿ ಅಡಮಾನವಿರಿಸಿ ಸಾಲ ಪಡೆದಿದ್ದರು. ಆದರೆ, ಸಾಲ ಮರುಪಾವತಿಸಿ ಚಿನ್ನವನ್ನು ಹಿಂತಿರುಗಿಸುವಂತೆ ಕೇಳಿದಾಗ ಆರೋಪಿಗಳು ಒಂದಲ್ಲೊಂದು ಕಾರಣ ನೀಡಿ ಮುಂದೂಡುತ್ತಾ ಬಂದಿದ್ದು, ಮೂಲ ಚಿನ್ನವನ್ನು ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿಗಳು ಇದುವರೆಗೆ ಸಾರ್ವಜನಿಕರಿಂದ ಒಟ್ಟು 750.98 ಗ್ರಾಂ ಚಿನ್ನವನ್ನು ಅಡಮಾನವಿರಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಭೀಮಪ್ಪ ಯಲ್ಲಪ್ಪ ಛಲವಾದಿ, ಸುಭಾಷ್ ಖಾರ್ವಿ, ನೇತ್ರಾವತಿ ಖಾರ್ವಿ ಅಲಿಯಾಸ್ ಸ್ವಪ್ನಿಲಾ ಪಾಲೇಕರ್, ಪ್ರಮೀತಾ ಖಾರ್ವಿ ಹಾಗೂ ಅಕ್ಷಯ ಸಾರಂಗ ಎಂಬ ಐವರ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕರಿಗೆ ಕಡಿಮೆ ಬಡ್ಡಿದರದ ಆಮಿಷವೊಡ್ಡಿ ಚಿನ್ನ ಪಡೆದು ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


