Friday, September 11, 2026

spot_img

ತರಗತಿಯಿಂದ ಟೆಂಟ್‌ಗೆ; ಪುಸ್ತಕದಾಚೆ ಬದುಕಿನ ಪಾಠ ಕಲಿಯುತ್ತಿರುವ ವಿದ್ಯಾರ್ಥಿಗಳು

ಉಡುಪಿ: ನಿತ್ಯ ನಾಲ್ಕು ಗೋಡೆಗಳ ನಡುವೆ ಕುಳಿತು ಪಾಠ ಕೇಳುವ ವಿದ್ಯಾರ್ಥಿಗಳು, ತರಗತಿಯಾಚೆ ಬದುಕಿನ ಪಾಠ ಕಲಿಯುತ್ತಿದ್ದಾರೆ. ಟೆಂಟ್ ಕಟ್ಟುವುದರಿಂದ ಹಿಡಿದು ಅಡುಗೆ ಮಾಡುವವರೆಗೆ ಎಲ್ಲವನ್ನೂ ತಾವೇ ನಿರ್ವಹಿಸುವ ಮೂಲಕ ಸ್ವಾವಲಂಬನೆ, ಶಿಸ್ತು ಹಾಗೂ ತಂಡದ ಮನೋಭಾವವನ್ನು ರೂಢಿಸಿಕೊಳ್ಳುತ್ತಿದ್ದಾರೆ.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ ವತಿಯಿಂದ ಇಂದ್ರಾಣಿ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ರೋವರ್–ರೇಂಜರ್ಸ್ ವಿಶೇಷ ಶಿಬಿರ ನಡೆಯುತ್ತಿದ್ದು, ಜಿಲ್ಲೆಯ 21 ಕಾಲೇಜುಗಳ 200ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ವಿದ್ಯಾರ್ಥಿಗಳೇ ಟೆಂಟ್ ನಿರ್ಮಿಸಿಕೊಂಡು ವಾಸ್ತವ್ಯಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ.

ಶಿಬಿರದಲ್ಲಿ ಪೆಟ್ರೋಲ್ ವ್ಯವಸ್ಥೆಯ ಮೂಲಕ ಅನ್ನ, ಸಾಂಬಾರು, ಚಪಾತಿ, ಪಲ್ಯ ಸೇರಿದಂತೆ ವಿವಿಧ ಆಹಾರಗಳನ್ನು ವಿದ್ಯಾರ್ಥಿಗಳೇ ತಯಾರಿಸಿ ಸೇವಿಸುತ್ತಿದ್ದಾರೆ. ಸೀಮಿತ ಸೌಲಭ್ಯಗಳಲ್ಲಿ ಜೀವನ ನಡೆಸುವುದು, ತಂಡವಾಗಿ ಕೆಲಸ ಮಾಡುವುದು, ಸಮಸ್ಯೆಗಳನ್ನು ಒಗ್ಗಟ್ಟಿನಿಂದ ಎದುರಿಸುವುದು ಸೇರಿದಂತೆ ಹಲವು ಜೀವನ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಯುತ್ತಿದ್ದಾರೆ.

ಮೊಬೈಲ್ ಹಾಗೂ ಆಧುನಿಕ ಜೀವನಶೈಲಿಯ ನಡುವೆ ಬೆಳೆಯುತ್ತಿರುವ ಯುವಜನತೆಗೆ ಪ್ರಕೃತಿಯ ನಡುವೆ ಬದುಕುವ ಅನುಭವ ನೀಡುವುದು ಶಿಬಿರದ ಪ್ರಮುಖ ಉದ್ದೇಶವಾಗಿದೆ. ಶಿಸ್ತು, ನಾಯಕತ್ವ, ಸ್ವಾವಲಂಬನೆ, ಆತ್ಮವಿಶ್ವಾಸ ಹಾಗೂ ಸಮಾಜಮುಖಿ ಚಿಂತನೆ ಬೆಳೆಸುವ ನಿಟ್ಟಿನಲ್ಲಿ ಶಿಬಿರ ಮಹತ್ವ ಪಡೆದಿದೆ.

ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಜಿಲ್ಲಾ ಕಾರ್ಯದರ್ಶಿ ಆನಂದ್ ಬಿ. ಅಡಿಗ, ಶಿಬಿರದ ನಾಯಕ ಹಾಗೂ ರೋವರ್ ಲೀಡರ್ ರಾಜೇಶ್ ಅವಲಕ್ಕಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನ್ ಶೇಖರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles