ಪ್ರಪಂಚದಲ್ಲಿ ಹುಟ್ಟಿದ ಯಾರು ಕೂಡ ಪರಿಪೂರ್ಣರಲ್ಲ!ತಪ್ಪು ಮಾಡುವುದು ಮಾನವನ ಸಹಜಗುಣ!ತಪ್ಪು ತಿದ್ದಿಕೊಂಡು ಬಾಳುವುದು ಜೀವನದಲ್ಲಿ ದೊಡ್ಡ ಗುಣ!ಅದು ಆತನ ಕೀರ್ತಿ ಗೌರವ ಹೆಚ್ಚಲು ಮೂಲಮೆಟ್ಟಿಲಾಗುವುದು!
ಗಾಂಧೀಜಿ ಮಾಡಿದ ತಪ್ಪು ಮನಸಾರೆ ಒಪ್ಪಿ ತಿದ್ದಿ ಕೊಂಡು ಬಾಳಿರುವುದರಿಂದಲೇ ಮಹಾತ್ಮ ಎನಿಸಿಕೊಂಡರು!!

ಯಕ್ಷಗಾನದಲ್ಲಿ ಅನ್ಯ ಭಾಷೆಯ ಬಳಕೆಯ ಕುರಿತು ಬಹಳಷ್ಟು ಚರ್ಚೆಗಳಾಗುತ್ತಿವೆ. ಪೌರಾಣಿಕ ಪ್ರಸಂಗಗಳು, ನಿರ್ದೇಶಿತ ಪೌರಾಣಿಕ ಪ್ರಸಂಗ ಅಥವಾ ಸಾಮಾಜಿಕ ಪ್ರಸಂಗದಲ್ಲಿ ಕನ್ನಡದೊಂದಿಗೆ ದೇಶೀಯ ಭಾಷೆ(ಹಿಂದಿ, ಸಂಸ್ಕೃತ ಇತ್ಯಾದಿ) ಬಳಕೆ ಬಹಳ ಹಿಂದಿನಿಂದಲೂ ಸೇರಿತ್ತು. ಆದರೆ ಈ ವರ್ಷ ಹೊಸದಾಗಿ ಪ್ರಾರಂಭವಾದ ಕುಕ್ಕೆಹಳ್ಳಿ ಮೇಳದಲ್ಲಿ ತಮಿಳು ಪದ್ಯ ಸೇರ್ಪಡೆ ಮಾಡಿ ಹಾಡಿರುವುದಕ್ಕೆ ಬಹಳ ವಿರೋಧ ವ್ಯಕ್ತವಾಗಿದೆ!ಬಳಕೆ ಮಾಡಿರುವುದು ಸರಿ ಎನ್ನುವ ವಾದವೂ ನನ್ನದಲ್ಲ!ತಪ್ಪು ಮಾಡಿರುವುದು ಒಪ್ಪಿ, ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ ಮೇಲೆ ಕಲಾವಿದನ ಕಲಾಬದುಕಿನ ಮೇಲೆ ಹರಿಹಾಯುತ್ತಿರುವುದು ಸರಿಯಲ್ಲ! ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಮೇಳ ಮಾಡಿದ ಯಜಮಾನರಿಗೆ ಗೊತ್ತು ಮೇಳ ನಡೆಸುವುದು ಹಾಗೂ ಕಲಾವಿದರ ಆಯ್ಕೆ ಮಾಡುವುದು!! ಹಾಕಿದ ಬಂಡವಾಳ ಹಿಂದೆ ಬರುತ್ತದೆ ಎನ್ನುವ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳದೆ ಮೇಳ ಮಾಡಲು ಹುಂಬು ಧೈರ್ಯದೊಂದಿಗೆ ದೇವರ ಮೇಲಿನ ನಂಬಿಕೆಯಿಂದ ಪ್ರಾರಂಭ ಮಾಡಿರುತ್ತಾರೆ. ಹರಕೆ ಮೇಳಗಳಿಗೆ ಪ್ರತಿನಿತ್ಯದ ಪ್ರದರ್ಶನ ಹುಡುಕುವ ಅಗತ್ಯ ಇರುವುದಿಲ್ಲ! ಆದರೆ ವಂತಿಗೆ ಸಂಗ್ರಹಿಸುವ ಮೇಳಗಳಿಗೆ ಕೆಲವು ದಿನ ಕಲಾವಿದರ ವೇತನ ಕೂಡ ನೀಡಲು ಸಾಲದೆ ಪ್ರದರ್ಶನ ನಡೆಯುವ ಸ್ಥಿತಿಯಿದೆ ಇದು ವಾಸ್ತವ.

ಮೂಲ ವಿಚಾರಕ್ಕೆ ಬಂದರೆ ಕುಕ್ಕೆಹಳ್ಳಿ ಮೇಳದಲ್ಲಿ ತಮಿಳು ಪದ್ಯ ಬಳಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಲಾವಿದ ಅರುಣ್ ಜಾರ್ಕಳ ಅವರು ಕ್ಷಮೆ ಯಾಚಿಸಿರುವುದು ಎಲ್ಲರಿಗೂ ತಿಳಿದಿದೆ. ತಪ್ಪು ಮಾಡಿರುವ ಕುರಿತು ಕ್ಷಮೆಯಾಚಿಸಿದ ಮೇಲೆ ವೈಯುಕ್ತಿಕ ದ್ವೇಷವಿದ್ದಂತೆ ಕಲಾವಿದನ ಮೇಲೆ ಹರಿಹಾಯುವುದು ಪ್ರಜ್ಞಾವಂತರ ಲಕ್ಷಣವಲ್ಲ! ಅಲ್ಲದೆ ಆತನನ್ನು ಮೇಳದಿಂದ ತೆಗೆದು ಹಾಕಬೇಕು ಎನ್ನುವ ಒತ್ತಡ ಹೇರುತ್ತಿರುವ ಹಿಂದಿರುವ ಉದ್ದೇಶ ಅರ್ಥವಾಗುತ್ತಿಲ್ಲ!! ಪುರಾಣದ ಸತ್ವ ಸಾರುತ್ತಾ ಯಕ್ಷರಸಿಕರ ಮನಸ್ಸು ಸೂರೆಗೊಳ್ಳಲು ತಿರುಗಾಟ ನಡೆಸುವ ಯಕ್ಷಗಾನ ಮೇಳಗಳು ಕನ್ನಡದ ಕಂಪು, ಸಂಸ್ಕೃತದ ಇಂಪು, ಹಳೆಗನ್ನಡದ ಮಹಿಮೆಯನ್ನು ಬಿತ್ತರಿಸುವ ಚಲಿಸುವ ವಿಶ್ವವಿದ್ಯಾಲಯ!ನಿರರ್ಗಳ ಭಾಷಾ ಪ್ರೌಢಿಮೆಯೊಂದಿಗೆ ನರ್ತನದ ಮೂಲಕ ಪುರಾಣದ ಸಾರವನ್ನು ಮನಸ್ಸಿಗೆ ನಾಟುವಂತೆ ಮಾಡುವ ಕಲಾಮಾತೆಯ ಕುಸುಮಗಳ ಅವಿರತ ಸಾಧನೆ ರಂಗದಲ್ಲಿ ಮೇಳೈಸುತ್ತದೆ. ಹಿಂದೆ ಗಂಡಸರಿಗೆ ಮಾತ್ರ ಸೀಮಿತವಾಗಿದ್ದ ಸಾಗರ ತೀರದ ಗಂಡುಕಲೆ ವೈಜ್ಞಾನಿಕವಾಗಿ ಬೆಳೆಯುತ್ತಿದ್ದಂತೆ ಮಕ್ಕಳು, ಹೆಂಗಸರು ಕೂಡ ನಮ್ಮಲ್ಲಿಯೂ ಸಾಮರ್ಥ್ಯವಿದೆ ಎಂದು ಸಾಧಿಸಿದ್ದಾರೆ.

ಯಕ್ಷಗಾನವೆನ್ನುವುದು ಹಿಂದೂ ಸಂಸ್ಕೃತಿಯ ಸಂಜೀವಿನಿ. ಇದು ಕರಾವಳಿಗೆ ಮಾತ್ರ ಸೀಮಿತವಾಗಿರದೆ, ಕನ್ನಡ ಸಂಸ್ಕೃತಿ ಕೀರ್ತಿ ಪತಾಕೆಯನ್ನು ದೇಶದ ಮೂಲೆಗಳಿಗೂ ಪಸರಿಸಿದೆ. ಮಾತ್ರವಲ್ಲ ವಿಶ್ವವ್ಯಾಪಿಯನ್ನಾಗಿಸಿದೆ ಎನ್ನಲು 2012 ರಲ್ಲಿ ಅಮೇರಿಕಾದಲ್ಲಿ ನಡೆದ ಅಕ್ಕಾ ಸಮ್ಮೇಳನದಲ್ಲಿ ಯಕ್ಷಗಾನ ಪ್ರದರ್ಶನ ಮಾಡಿರುವುದು ಸಾಕ್ಷಿ. ತೆಂಕು ಅಥವಾ ಬಡಗುತಿಟ್ಟು ಯಾವುದೆ ಮೇಳವಾದರೂ, ತಿರುಗಾಟ ಹೊರಡುವುದು ಮಾತ್ರ ದೇವರ ಹೆಸರಿನಲ್ಲಿಯೇ? ಕಲೆ ಕಾಸಿಗಾಗಿ, ಕಾಲಯಾಪನೆಗಾಗಿ ಎನ್ನುವ ಜನರಿಗೆ ಮುದ ನೀಡುವುದಕ್ಕಾಗಿ ಮುಂದಾದ ಡೇರೆ ಹಾಗೂ ಕಾಲಮಿತಿ ಮೇಳ ಕೂಡ ತಿರುಗಾಟ ನಡೆಸುವುದು ದೇವರ ಹೆಸರಿನಿಂದ ಮತ್ತು ದೇವಸ್ಥಾನದ ನಾಮಮುದ್ರೆಯಿಂದ ಎನ್ನುವುದು ಸುಳ್ಳಲ್ಲ. ಪ್ರತಿ ಮೇಳಗಳು ದೇವರ ಗುಡಿಯಿಂದಲೇ ಹೊರಟು, ಕೊನೆಗೆ ಬಂದು ಸೇರುವುದು ಅದೇ ಸುಂದರ ಭೂರಮೆಯ ಮಡಿಲಿಗೆ.

ಯಕ್ಷಗಾನದಲ್ಲಿ ಸೇವೆ ಸಲ್ಲಿಸುವ ಕಲಾವಿದ ತಮ್ಮ ಜೀವನದಲ್ಲಿ ನೋವು ತುಂಬಿಕೊಂಡಿದ್ದರೂ ಅದನ್ನು ರಂಗದಲ್ಲಿ ತೋರಗೊಡದೆ, ಜೀವನಮೌಲ್ಯ, ನವರಸಾದಿಗಳನ್ನು ಮೇಳವಿಸಿ ಮಹಾನ್ ಪುರುಷರ ಜೀವನದೊಳಗೆ ಪರಾಕಾಯ ಪ್ರವೇಶ ಮಾಡಿ, ತಾನು ತಾನಾಗಿರದೆ, ಕಥಾವಸ್ತುವಿನ ಪ್ರಮುಖ ಪಾತ್ರವಾಗಿ, ಮನರಂಜನೆ ನೀಡುವಲ್ಲಿ ಸತತ ಪ್ರಯತ್ನ ಮಾಡುತ್ತಾನೆ.(ಕೆಲವು ಅಪಸವ್ಯ ನಡೆದಿರಬಹುದು). ಹರಕೆ ಮೇಳ ಅಥವಾ ಡೇರೆ ಮೇಳಗಳಾದರೂ, ತಾವು ಮಾಡುತ್ತಿರುವುದು ಕಲಾಮಾತೆಯ ಸೇವೆ ಎನ್ನುವುದನ್ನು ಮನಗಾಣಬೇಕು. ಕಾಲಕ್ಕೆ ತಕ್ಕ ಬದಲಾವಣೆ ಸಹಜವಾಗಿರಬೇಕು. ಬದಲಾವಣೆಯೊಂದಿಗೆ ಆಧುನಿಕ ಜೀವನ ಮೌಲ್ಯಗಳು ಪ್ರಸಂಗದಲ್ಲಿ ಬಂದಾಗ ಸಾರ್ಥಕತೆ ಪಡೆಯುತ್ತದೆ. ಅಲ್ಲಿಯೂ ಕೂಡ ಎಚ್ಚರಿಕೆಯ ಅಗತ್ಯತೆಯಿದೆ. ಯಕ್ಷಗಾನಕ್ಕೆ ಅದರದೇ ಆದ ವೇಷಭೂಷಣ, ಸಂಪ್ರದಾಯದ ಕಟ್ಟುಪಾಡುಗಳಿವೆ. ಅದನ್ನು ಬಿಟ್ಟು ಆಧುನಿಕತೆಯಂತೆ ವೇಷಭೂಷಣಗಳನ್ನು ತಂದರೆ ಅಪಹಾಸ್ಯವಾಗುವುದರೊಂದಿಗೆ ವಾತಾವರಣವನ್ನು ಕೆಡಿಸುವ ಮತ್ತು ಪ್ರೇಕ್ಷಕನನ್ನು ತಪ್ಪು ದಾರಿಗೆಳೆಯುವ ಸಾದ್ಯತೆಗಳೆ ಹೆಚ್ಚು. ಕಾಲಕ್ಕೆ ತಕ್ಕಂತೆ ಎಂತಹ ಬದಲಾವಣೆಗಳಾದರೂ ಸಹ ಸಿದ್ದ ಶೈಲಿಗೆ ಹಾಗೂ ಅದರ ನಿಯಮಿತವಾದ ಚೌಕಟ್ಟಿಗೆ ಬದ್ದವಾಗಿರಬೇಕೆ ಹೊರತು ಅವುಗಳನ್ನು ಅತಿಕ್ರಮಿಸಿ ಅಲ್ಲ. ಯಕ್ಷಗಾನದ ಸಂಪ್ರದಾಯ, ರೀತಿ ನೀತಿ ನಿಯಮಗಳನ್ನು ಪಾಲಿಸಿ, ಬಾನಿನೆತ್ತರಕ್ಕೆ ಏರಿಸುವ ಗುರಿ ಪ್ರಸಂಗಕರ್ತರ ಮತ್ತು ಕಲಾವಿದರ ಧ್ಯೇಯವಾಗಬೇಕು ಎನ್ನುವ ಅಂಶವನ್ನು ಮನಗಾಣಬೇಕು. ಸಂಗತವಲ್ಲದ ಮೌಲ್ಯ ಕೈಬಿಟ್ಟು, ಸಂಗತವಾದ ಜೀವನಮೌಲ್ಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಂಡು ಯಕ್ಷಗಾನದ ಕಂಪನ್ನು ದಿಗಂತದೆಡೆಗೆ ಸಾಗಿಸುವಂತಾಗಬೇಕು. ಇದನ್ನು ಕಲಾವಿದರು, ಯಜಮಾನರು, ಸಂಘಟಕರು ಹಾಗೂ ಪ್ರೇಕ್ಷಕರು ಅರಿತುಕೊಂಡಾಗ ಯಕ್ಷಗಾನದ ಮೌಲ್ಯ ಹೆಚ್ಚುತ್ತದೆ.

ಯಕ್ಷಗಾನಂ ವಿಶ್ವಗಾನಂ!!
(ಯಕ್ಷಗಾನಕ್ಕೆ ನನ್ನ ಕೊಡುಗೆ ಏನು ಅಂತಾ ಕೇಳಲು ಹೋಗಬೇಡಿ! ಯಕ್ಷಗಾನದಲ್ಲಿ ಅಪಸವ್ಯಗಳಾದಾಗ ಹಾಗೂ ಕಲಾವಿದರಿಗೆ ತೊಂದರೆಯಾದಾಗ ಹೋರಾಟ ಮಾಡಿರುವುದಕ್ಕೆ ದಾಖಲೆ ಬೇಕಾದರೆ ನನ್ನಲ್ಲಿದೆ!ಹಾಗಂತ ಹಣ ಸಂಗ್ರಹ ಮಾಡಿ ಇದುವರೆಗೆ ಯಕ್ಷಗಾನ ಮಾಡಲು ಹೋಗದಿರುವ ಕಾರಣ ನನ್ನ ಪರಿಚಯ ಕಡಿಮೆ ಇದ್ದಿರಬಹುದು.)
ಸಂದೇಶ್ ಶೆಟ್ಟಿ ಆರ್ಡಿ
ಯಕ್ಷಗಾನ ಕಲಾವಿದ ಹಾಗೂ ಪತ್ರಕರ್ತ


