Wednesday, September 23, 2026

spot_img

ಆಯುರ್ವೇದ ಜೀವನಶೈಲಿಯಾದಾಗ ಬದುಕು ಸುಂದರ: ಎಂ.ಎ. ಗಫೂರ್

ಉಡುಪಿ : ಆಯುರ್ವೇದ ಕೇವಲ ವೈದ್ಯಕೀಯ ಪದ್ಧತಿಯಲ್ಲ, ಜೀವನಶೈಲಿಯ ಭಾಗವಾಗಿದೆ. ಆಯುರ್ವೇದ, ಯುನಾನಿ, ಹೋಮಿಯೋಪತಿ ಹಾಗೂ ಯೋಗದಂತಹ ಚಿಕಿತ್ಸಾ ಪದ್ಧತಿಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯಕರ ಹಾಗೂ ಸುಂದರ ಬದುಕು ನಡೆಸಬಹುದು ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು. ಬ್ರಹ್ಮಗಿರಿಯ ಬಾಲಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಯುಷ್ ಇಲಾಖೆ ವತಿಯಿಂದ ರಾಷ್ಟ್ರೀಯ ಆಯುಷ್ ಅಭಿಯಾನದಡಿ ಆಯೋಜಿಸಿದ್ದ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಧನ್ವಂತರಿ ದಿನಾಚರಣೆಯನ್ನು ರಾಷ್ಟ್ರೀಯ ಆಯುರ್ವೇದ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಆಯುರ್ವೇದ ದೇಶದ ಪಾರಂಪರಿಕ ಜ್ಞಾನಸಂಪತ್ತಾಗಿದೆ. ಋಷಿ-ಮುನಿಗಳ ಅನುಭವ ಹಾಗೂ ತಪಸ್ಸಿನ ಫಲವಾಗಿರುವ ಆಯುರ್ವೇದವನ್ನು ಎಲ್ಲ ವರ್ಗದ ಜನರು ಅನುಸರಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ಆಯುರ್ವೇದ ಹಾಗೂ ಪ್ರಾಕೃತಿಕ ಚಿಕಿತ್ಸೆಯ ಬಗ್ಗೆ ಜನರಲ್ಲಿ ಮತ್ತಷ್ಟು ಅರಿವು ಮೂಡಿಸಲು ಸಹಕಾರಿಯಾಗುತ್ತವೆ ಎಂದರು. ಅನಗತ್ಯವಾಗಿ ಮಾತ್ರೆ ಹಾಗೂ ಸ್ಟೀರಾಯ್ಡ್‌ಗಳ ಬಳಕೆಯನ್ನು ಕಡಿಮೆ ಮಾಡಿ, ಜೀವನಶೈಲಿಯಲ್ಲಿ ನೈಸರ್ಗಿಕ ಹಾಗೂ ಆಯುರ್ವೇದ ಪದ್ಧತಿಗಳಿಗೆ ಆದ್ಯತೆ ನೀಡಬೇಕು. ತುರ್ತು ಸಂದರ್ಭಗಳಲ್ಲಿ ಅಲೋಪಥಿ ಚಿಕಿತ್ಸೆಯೂ ಅಗತ್ಯವಾಗಿದ್ದು, ವಿವಿಧ ವೈದ್ಯಕೀಯ ಪದ್ಧತಿಗಳ ಸೂಕ್ತ ಬಳಕೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು ಮಾತನಾಡಿ, ಹಿಂದಿನ ಕಾಲದಲ್ಲಿ ಗ್ರಾಮಗಳಲ್ಲಿ ಆಯುರ್ವೇದ ಪಂಡಿತರು ಹಾಗೂ ಮನೆಮದ್ದುಗಳ ಬಳಕೆ ಸಾಮಾನ್ಯವಾಗಿತ್ತು. ಆಧುನಿಕ ವೈದ್ಯಕೀಯ ಪದ್ಧತಿಯ ಬೆಳವಣಿಗೆಯಿಂದ ಮಾತ್ರೆ ಆಧಾರಿತ ತ್ವರಿತ ಚಿಕಿತ್ಸೆಯ ಅಭ್ಯಾಸ ಹೆಚ್ಚಾದರೂ, ಇದೀಗ ಆಯುರ್ವೇದದ ಮಹತ್ವವನ್ನು ಜನರು ಮತ್ತೆ ಅರಿಯುತ್ತಿದ್ದಾರೆ ಎಂದರು. ಕಾರ್ಯಕ್ರಮದಿಂದ ಆಶಾ ಕಾರ್ಯಕರ್ತೆಯರು ಪಡೆದ ಮಾಹಿತಿಯನ್ನು ಜನರಿಗೆ ತಲುಪಿಸಿದಾಗ ಆಯುರ್ವೇದ ದಿನಾಚರಣೆಯ ಉದ್ದೇಶ ಸಾರ್ಥಕವಾಗುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿ ಡಾ. ಶ್ರೀಧರ ಬಾಯರಿ ವಿಶೇಷ ಉಪನ್ಯಾಸ ನೀಡಿದರು. ಹಿರಿಯ ವೈದ್ಯ ಡಾ. ಮಹಮ್ಮದ್ ಇಕ್ಬಾಲ್, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಸಂಘದ ಅಧ್ಯಕ್ಷೆ ಡಾ. ಹೇಮಲತಾ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ. ಸರ್ವೋತ್ತಮ ಶೆಟ್ಟಿ ನಿರೂಪಿಸಿದರು. ಡಾ. ಪ್ರದೀಪ್ ಆರ್. ಶೆಟ್ಟಿ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles