ಉಡುಪಿ: ಸಮಾಜಸೇವಕ ವಿಶು ಶೆಟ್ಟಿ ಅವರಿಗೆ ಕೆಎಸ್ಆರ್ಟಿಸಿ ವೋಲ್ವೋ ಬಸ್ ಡಿಕ್ಕಿ ಹೊಡೆದ ಘಟನೆ ಗುರುವಾರ ಉಡುಪಿಯ ನಿಟ್ಟೂರು ಬಳಿ ನಡೆದಿದೆ. ವಿಶು ಶೆಟ್ಟಿ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕೆಎಸ್ಆರ್ಟಿಸಿ ವೋಲ್ವೋ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಅಪಘಾತದ ಬಳಿಕ ಬಸ್ ನಿಲ್ಲಿಸದೆ ಮುಂದಕ್ಕೆ ತೆರಳಿದೆ ಎಂದು ತಿಳಿದುಬಂದಿದೆ.

ಘಟನೆ ಗಮನಿಸಿದ ಅಂಬಲಪಾಡಿಯ ಪಡುಮನೆ ಸುರೇಶ್ ಅವರು ತಕ್ಷಣ ಗಾಯಾಳು ವಿಶು ಶೆಟ್ಟಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಅಪಘಾತದ ಕುರಿತು ಸಂಚಾರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.

ವಿಶು ಶೆಟ್ಟಿ ಅವರ ಕೈ ಮತ್ತು ಕಾಲಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೈದ್ಯರು ಸುಮಾರು 20 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ.


