ಉಡುಪಿ: ಸಂಶೋಧನೆಯು ಕೇವಲ ಶೈಕ್ಷಣಿಕ ಸಾಧನೆಗೆ ಸೀಮಿತವಾಗದೆ, ಸಮಾಜದ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದರೊಂದಿಗೆ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕು ಎಂದು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಕುಲಪತಿ ಡಾ. ಶರತ್ ಕೆ. ರಾವ್ ಅಭಿಪ್ರಾಯಪಟ್ಟರು. ಮಾಹೆ ವತಿಯಿಂದ ಮಣಿಪಾಲದಲ್ಲಿ ಆಯೋಜಿಸಲಾದ ಸಂಶೋಧನಾ ಫಲಿತಾಂಶ ಮತ್ತು ಪರಿಣಾಮ ಪ್ರಶಸ್ತಿ-2026 ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ವೈದ್ಯಕೀಯ, ಆರೋಗ್ಯ ವಿಜ್ಞಾನ, ತಂತ್ರಜ್ಞಾನ, ನಿರ್ವಹಣೆ, ವಿನ್ಯಾಸ, ಕಾನೂನು, ವಾಸ್ತುಶಿಲ್ಪ, ಮಾನವಿಕ ಹಾಗೂ ಸಮಾಜ ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾಹೆ ಸಂಶೋಧನಾ ಚಟುವಟಿಕೆಗಳನ್ನು ನಡೆಸುತ್ತಿದೆ. ಆರೋಗ್ಯ ಸೇವೆಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆ, ಆರೋಗ್ಯಕರ ವೃದ್ಧಾಪ್ಯ, ಹವಾಮಾನ ಬದಲಾವಣೆ, ಸೂಕ್ಷ್ಮಜೀವಿ ಪ್ರತಿರೋಧ, ಮಾನಸಿಕ ಆರೋಗ್ಯ, ಸುಸ್ಥಿರತೆ ಹಾಗೂ ಗುಣಮಟ್ಟದ ಆರೋಗ್ಯ ಸೇವೆಯಲ್ಲಿ ಸಮಾನ ಅವಕಾಶ ಕಲ್ಪಿಸುವಂತಹ ಸವಾಲುಗಳನ್ನು ಎದುರಿಸಲು ಬಹುಶಿಸ್ತೀಯ ಸಂಶೋಧನೆ ಅಗತ್ಯವಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಬಹುವಿಷಯಕ, ಸಹಯೋಗಾತ್ಮಕ ಮತ್ತು ಪರಿವರ್ತನಾತ್ಮಕ ಸಂಶೋಧನೆಗೆ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಗೌರವ ಅತಿಥಿಯಾಗಿ ಭಾಗವಹಿಸಿದ್ದ ಯುಕೆಯ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ಉದ್ಯಮ ವಿಭಾಗದ ಉಪಕುಲಪತಿ ಪ್ರೊ. ಜೋ ರೈಕ್ರಾಫ್ಟ್-ಮಲೋನ್ ಮಾತನಾಡಿ, ಸಂಶೋಧಕರು ಸಾಂಪ್ರದಾಯಿಕ ಶೈಕ್ಷಣಿಕ ಮಾನದಂಡಗಳನ್ನು ಮೀರಿ ತಮ್ಮ ಸಂಶೋಧನೆ ವೈದ್ಯಕೀಯ ಚಿಕಿತ್ಸಾ ಪದ್ಧತಿ, ನೀತಿ ನಿರೂಪಣೆ ಹಾಗೂ ಸಮಾಜದ ಮೇಲೆ ಬೀರುವ ಪರಿಣಾಮಗಳತ್ತ ಗಮನ ಹರಿಸಬೇಕು ಎಂದರು. ಸಂಕೀರ್ಣ ಜಾಗತಿಕ ಸವಾಲುಗಳನ್ನು ಎದುರಿಸಲು ವಿವಿಧ ಕ್ಷೇತ್ರಗಳ ನಡುವಿನ ಸಹಯೋಗ ಅಗತ್ಯವಾಗಿದೆ. ಶೈಕ್ಷಣಿಕ ಸಂಶೋಧನೆಯ ಕಠಿಣ ಮಾನದಂಡಗಳನ್ನು ನೈಜ ಜಗತ್ತಿನ ಫಲಿತಾಂಶಗಳಾಗಿ ಪರಿವರ್ತಿಸಿದಾಗ ಮಾತ್ರ ಸಂಶೋಧನೆಗೆ ನಿಜವಾದ ಅರ್ಥ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು. ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಸಹ ಡೀನ್ ಪ್ರೊ. ನ್ಯಾನ್ಸಿ ಪ್ರೆಸ್ಟನ್ ಮಾತನಾಡಿ, ಜಾಗತಿಕ ಮಟ್ಟದ ಬದಲಾವಣೆಗೆ ಅಂತಾರಾಷ್ಟ್ರೀಯ ಸಹಭಾಗಿತ್ವ ಮತ್ತು ಜ್ಞಾನ ವಿನಿಮಯ ಅತ್ಯಗತ್ಯ. ಮಾಹೆ ಮತ್ತು ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದ ನಡುವಿನ ಸಹಯೋಗವು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ನೀತಿ ನಿರೂಪಣೆಯಲ್ಲಿ ಸಾಕ್ಷ್ಯಾಧಾರಿತ ಸಂಶೋಧನೆ ಮಹತ್ವದ ಪಾತ್ರ ವಹಿಸಲಿದ್ದು, ಸಂಶೋಧನಾ ಫಲಿತಾಂಶಗಳನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡುವುದು ಅಗತ್ಯ ಎಂದು ಹೇಳಿದರು.

ಸಮಾರಂಭದಲ್ಲಿ ಸ್ಟ್ಯಾನ್ಫೋರ್ಡ್-ಅಲ್ಸೆವಿಯರ್ನ ಜಗತ್ತಿನ ಅಗ್ರ ಶೇ.2ರ ವಿಜ್ಞಾನಿಗಳು ಮತ್ತು ಸಂಶೋಧಕರ ಪಟ್ಟಿಯಲ್ಲಿ ಸ್ಥಾನ ಪಡೆದ ಮಾಹೆಯ ವಿಜ್ಞಾನಿಗಳು ಹಾಗೂ ಸಂಶೋಧಕರನ್ನು ಸನ್ಮಾನಿಸಲಾಯಿತು. ಮೂರು ಪ್ರತ್ಯೇಕ ವರ್ಷಗಳಲ್ಲಿನ ಅವರ ಸಂಶೋಧನಾ ಸಾಧನೆಗಳನ್ನು ಗುರುತಿಸಿ ಗೌರವಿಸಲಾಯಿತು. ಸಮಾಜದ ಮೇಲೆ ಅರ್ಥಪೂರ್ಣ ಪರಿಣಾಮ ಬೀರಬಲ್ಲ ಸಂಶೋಧನೆಗೆ ಉತ್ತೇಜನ ನೀಡುವುದು ಹಾಗೂ ಅಂತರ್ವಿಷಯಕ ಸಹಯೋಗಕ್ಕೆ ಸೂಕ್ತ ವೇದಿಕೆ ಕಲ್ಪಿಸುವ ಮಾಹೆಯ ಬದ್ಧತೆಯನ್ನು ಈ ಪ್ರಶಸ್ತಿ ಪ್ರದಾನ ಸಮಾರಂಭ ಪ್ರತಿಬಿಂಬಿಸಿತು. ಮಾಹೆಯ ಸಹಕುಲಪತಿಗಳಾದ ಡಾ. ದಿಲೀಪ್ ಜಿ. ನಾಯಕ್, ಪ್ರೊ. ಮಧು ವೀರರಾಘವನ್, ಡಾ. ಕರುಣಾಕರ್ ಕೋಟೆಗಾರ್, ಮೇಜರ್ ಜನರಲ್ (ಡಾ.) ಮ್ಯಾಥ್ಯೂ ಜೇಕಬ್ ಹಾಗೂ ಕುಲಸಚಿವ ಡಾ. ಗಿರಿಧರ ಕಿಣಿ ಉಪಸ್ಥಿತರಿದ್ದರು.


