ಉಡುಪಿ : ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ಸಂಗೀತ ನಾಟಕ ಅಕಾಡೆಮಿಯು ವಂದೇ ಮಾತರಂ ರಚನೆಯ 150ನೇ ವರ್ಷಾಚರಣೆ ಹಾಗೂ ಮಹಾಕವಿ ಕಾಳಿದಾಸ ಜಯಂತಿಯ ಅಂಗವಾಗಿ ಜುಲೈ 15ರಂದು ದೇಶಾದ್ಯಂತ ಆಯೋಜಿಸಿದ್ದ ರಾಷ್ಟ್ರೀಯ ರಂಗಮಹೋತ್ಸವದಲ್ಲಿ ಯಕ್ಷಕಲಾ ಅಕಾಡೆಮಿ (ರಿ.) ವತಿಯಿಂದ ಪ್ರದರ್ಶಿಸಲಾದ ರಾಣಿ ಕಿತ್ತೂರು ಚೆನ್ನಮ್ಮ ಯಕ್ಷಗಾನ ಪ್ರಸಂಗ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ದೇಶದಾದ್ಯಂತ 150ಕ್ಕೂ ಅಧಿಕ ವೇದಿಕೆಗಳಲ್ಲಿ, 150ಕ್ಕೂ ಹೆಚ್ಚು ರಂಗತಂಡಗಳು, 39ಕ್ಕೂ ಅಧಿಕ ಭಾರತೀಯ ಭಾಷೆಗಳಲ್ಲಿ ಸುಮಾರು ನಾಲ್ಕು ಸಾವಿರ ಕಲಾವಿದರ ಭಾಗವಹಿಸುವಿಕೆಯಿಂದ ನಡೆದ ಈ ರಾಷ್ಟ್ರೀಯ ಮಹೋತ್ಸವದಲ್ಲಿ, ಬೆಂಗಳೂರಿನ ಎನ್.ಆರ್. ಕಾಲೋನಿಯ ಸಿ. ಅಶ್ವತ್ಥ್ ಕಲಾಮಂದಿರದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಿತು. ಹಿರಿಯ ಯಕ್ಷಕವಿ ಶ್ರೀಧರ್ ಡಿ.ಎಸ್. ಅವರ ರಚನೆಯಾದ ಈ ಪ್ರಸಂಗವನ್ನು ಯುವ ನಿರ್ದೇಶಕಿ ಚಿಕ್ಕಲಾ ಕೆ. ತುಂಗ ನಿರ್ದೇಶಿಸಿದ್ದು, ಕಿತ್ತೂರಿನ ರಾಣಿ ಚೆನ್ನಮ್ಮ ಅವರ ಜೀವನ, ಶೌರ್ಯ ಮತ್ತು ಬ್ರಿಟಿಷರ ವಿರುದ್ಧದ ಹೋರಾಟವನ್ನು ರಂಗಭಾಷೆಯಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿತು.

ಪ್ರಸಂಗದಲ್ಲಿ ಕಿತ್ತೂರಿನ ಅರಸ ಮಲ್ಲಸರ್ಜ ದೇಸಾಯಿ ಹಾಗೂ ಚೆನ್ನಮ್ಮ ಅವರ ವಿವಾಹದಿಂದ ಆರಂಭವಾಗಿ, ಮಲ್ಲಸರ್ಜರ ನಿಧನ, ಶಿವಲಿಂಗ ರುದ್ರಸರ್ಜನ ಪಟ್ಟಾಭಿಷೇಕ, ಬ್ರಿಟಿಷರ ದತ್ತು ನೀತಿಯ ವಿರುದ್ಧ ಚೆನ್ನಮ್ಮ ನಡೆಸಿದ ಹೋರಾಟ, ಧಾರವಾಡದ ಕಲೆಕ್ಟರ್ ಥ್ಯಾಕರೆ ವಿರುದ್ಧದ ಸಮರ, ಸಂಗೊಳ್ಳಿ ರಾಯಣ್ಣನ ಶೌರ್ಯ ಮತ್ತು ಅಂತಿಮವಾಗಿ ಚೆನ್ನಮ್ಮಳ ಬಂಧನ ಹಾಗೂ ಸಾವಿನವರೆಗಿನ ಘಟನೆಗಳನ್ನು ಮನೋಜ್ಞವಾಗಿ ಚಿತ್ರಿಸಲಾಯಿತು.

ಚೆನ್ನಮ್ಮಳ ಪಾತ್ರದಲ್ಲಿ ಕುಮಾರಿ ಪೂಜಾ ಆಚಾರ್ಯ ಅವರು ಭಾವಪೂರ್ಣ ಅಭಿನಯ, ಸಂಭಾಷಣೆ ಹಾಗೂ ರಂಗಸಾನ್ನಿಧ್ಯದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ರಾಘವೇಂದ್ರ ಐತಾಳ್ ಮಲ್ಲಸರ್ಜನ ಪಾತ್ರಕ್ಕೆ ಸಮರ್ಪಕ ನ್ಯಾಯ ಒದಗಿಸಿದರೆ, ಅಭಿನವ ತುಂಗ ಸಂಗೊಳ್ಳಿ ರಾಯಣ್ಣನ ಪಾತ್ರದಲ್ಲಿ ಚುರುಕಿನ ನೃತ್ಯ ಹಾಗೂ ಅಭಿನಯದ ಮೂಲಕ ವಿಶೇಷ ಪ್ರಶಂಸೆಗೆ ಪಾತ್ರರಾದರು.

ಪ್ರದರ್ಶನದ ಅಂತ್ಯದಲ್ಲಿ ಹದಿನಾರು ಕಲಾವಿದರು ವಂದೇ ಮಾತರಂ ಗೀತೆಗೆ ನೀಡಿದ ಸಮೂಹಾಭಿನಯ ವಿಶೇಷ ಆಕರ್ಷಣೆಯಾಗಿ ಮೂಡಿಬಂತು. ರಾಷ್ಟ್ರಭಕ್ತಿ, ಇತಿಹಾಸ ಮತ್ತು ಯಕ್ಷಗಾನ ಕಲೆಯ ಸೊಗಡನ್ನು ಸಮನ್ವಯಗೊಳಿಸಿದ ಈ ಪ್ರದರ್ಶನ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಗಳಿಸಿತು. ರಾಷ್ಟ್ರೀಯ ಮಟ್ಟದಲ್ಲಿ ಈ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಿದ ಸಂಗೀತ ನಾಟಕ ಅಕಾಡೆಮಿ ಹಾಗೂ ಪ್ರದರ್ಶನವನ್ನು ಅಚ್ಚುಕಟ್ಟಾಗಿ ರೂಪಿಸಿದ ಯಕ್ಷಕಲಾ ಅಕಾಡೆಮಿ (ರಿ.)ಗೆ ಕಲಾಭಿಮಾನಿಗಳು ಅಭಿನಂದನೆ ಸಲ್ಲಿಸಿದರು.


