ಉಡುಪಿ : ಯಕ್ಷಗಾನ ಕಲಾರಂಗ ವತಿಯಿಂದ ಆಯೋಜಿಸಲಾದ ನಾಲ್ಕು ದಿನಗಳ ವೃತ್ತಿ ಮೇಳದ ಯುವ ಕಲಾವಿದರ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ನೆನಪಿನ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಶುಕ್ರವಾರ ಐವೈಸಿ ಸಭಾಭವನದಲ್ಲಿ ನಡೆಯಿತು. 60,000 ನಗದು ಬಹುಮಾನ ಒಳಗೊಂಡ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಚಂದ್ರಶೇಖರ ದಾಮ್ಲೆ ಅವರಿಗೆ ಪ್ರದಾನ ಮಾಡಲಾಯಿತು.

ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತೃ ಡಾ. ಜಿ. ಭೀಮೇಶ್ವರ ಜೋಶಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಕಲೆ, ಶಿಕ್ಷಣ ಹಾಗೂ ಸಮಾಜ ಸೇವೆಯ ಕ್ಷೇತ್ರದಲ್ಲಿ ಯಕ್ಷಗಾನ ಕಲಾರಂಗ ಸಲ್ಲಿಸುತ್ತಿರುವ ಸೇವೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಹಿರಿಯ ವಿದ್ವಾಂಸ ಡಾ. ಬಿ.ಎ. ವಿವೇಕ ರೈ ಅಭಿನಂದನಾ ಭಾಷಣ ಮಾಡಿ, ಡಾ. ದಾಮ್ಲೆಯವರ ಯಕ್ಷಗಾನ ಕ್ಷೇತ್ರದ ಸಾಧನೆಗಳನ್ನು ಪರಿಚಯಿಸಿದರು. ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಯಕ್ಷಗಾನದ ವಾಚಿಕ ಪರಂಪರೆ ಅತ್ಯಂತ ಸಮೃದ್ಧವಾಗಿದ್ದು, ಶುದ್ಧ ಉಚ್ಚಾರಣೆ ಮತ್ತು ಸ್ಪಷ್ಟ ಮಾತುಗಾರಿಕೆ ಮೂಲಕ ಯುವ ಕಲಾವಿದರು ಶ್ರೇಷ್ಠ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಪ್ರಶಸ್ತಿ ಸ್ವೀಕರಿಸಿದ ಡಾ. ಚಂದ್ರಶೇಖರ ದಾಮ್ಲೆ, ಯಕ್ಷಗಾನದ ಹಿತರಕ್ಷಣೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿ, ಮಕ್ಕಳಿಗೆ ತರಬೇತಿ, ಕಮ್ಮಟ, ಕಾರ್ಯಾಗಾರ ಹಾಗೂ ಪ್ರದರ್ಶನಗಳ ಮೂಲಕ ಕಲೆಯ ಬೆಳವಣಿಗೆಗೆ ಶ್ರಮಿಸುತ್ತಿರುವುದಾಗಿ ಹೇಳಿದರು. ಯಕ್ಷಗಾನ ಕಲಾರಂಗದಿಂದ ದೊರೆತ ಈ ಗೌರವ ಧನ್ಯತೆಯ ಭಾವ ಮೂಡಿಸಿದೆ ಎಂದರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀಮತಿ ಜಯಲಕ್ಷ್ಮೀ ಸಿ. ದಾಮ್ಲೆ ಹಾಗೂ ಅಕ್ಷರ ದಾಮ್ಲೆ ಅವರನ್ನು ಸಹ ಗೌರವಿಸಲಾಯಿತು. ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ವಿಶ್ವಸ್ಥರಾದ ಗಿರಿಜಾ ಶಿವರಾಮ ಶೆಟ್ಟಿ, ತಲ್ಲೂರು ಶಿವಪ್ರಸಾದ್ ಶೆಟ್ಟಿ ಮತ್ತು ಸುನಿಲ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಬಿರಾರ್ಥಿಗಳಾದ ಶ್ರೇಯಸ್, ಸುಧೀರ್ ಉಪ್ಪೂರು, ಶಿವಕುಮಾರ್ ಅಳಗೋಡು, ವಿನಯ್ ಬೇರೊಳ್ಳಿ, ಚಂದ್ರಹಾಸ ಗೌಡ ಹೊಸಪಟ್ಟಣ ಹಾಗೂ ಶಿವಮೂರ್ತಿ ತಾರೇಕೋಡ್ಲು ತಮ್ಮ ಅನುಭವಗಳನ್ನು ಹಂಚಿಕೊಂಡರು. ಶಿಬಿರದ ನಿರ್ದೇಶಕ ಪವನ್ ಕಿರಣ್ ಕೆರೆ ಮಾತನಾಡಿ, ಇಂತಹ ಶಿಬಿರಗಳು ಕಲಾವಿದರ ಕಲಾ ಕೌಶಲ ಅಭಿವೃದ್ಧಿಗೆ ಪೂರಕವಾಗಿವೆ ಎಂದು ತಿಳಿಸಿದರು. ನಾಲ್ಕು ದಿನಗಳ ಕಾಲ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಹಿರಿಯ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ ಹಾಗೂ ಅನಂತ ಪದ್ಮನಾಭ ಪಾಠಕ್ ಅವರನ್ನು ಸನ್ಮಾನಿಸಲಾಯಿತು. ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ, ಪುಸ್ತಕಗಳು ಹಾಗೂ ಗೌರವ ಸಂಭಾವನೆ ವಿತರಿಸಲಾಯಿತು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಹಾಗೂ ಶಿಬಿರದ ಪ್ರಾಯೋಜಕರಾದ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ವಿದ್ಯಾಪ್ರಸಾದ್ ಸಹಕರಿಸಿದರು. ಸಂಸ್ಥೆಯ ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು.



