ಉಡುಪಿ : ಮಣಿಪಾಲದ ಮಾಹೆ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ತುಳು ಸಂಭಾಷಣ ತರಗತಿಯ ಸಮಾರೋಪ ಸಮಾರಂಭ ಅ. 16ರಂದು ಸರ್ವೋದಯ ಹಾಲ್ನಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ತುಳು ಭಾಷೆಗೆ ಕರ್ನಾಟಕದ ಹೆಚ್ಚುವರಿ ಆಡಳಿತ ಭಾಷೆಯಾಗಿ ಮಾನ್ಯತೆ ದೊರೆತಿರುವ ಕುರಿತು ಸಂವಾದ ಕಾರ್ಯಕ್ರಮವೂ ಜರುಗಿತು.

ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್ ಮಾತನಾಡಿ, “ತುಳು ಭಾಷೆಗೆ ದೊರೆತಿರುವ ಮಾನ್ಯತೆ ಕೇವಲ ಒಂದು ಭಾಷೆಗೆ ಸಿಕ್ಕ ಗೌರವವಲ್ಲ; ಅದು ಭಾಷೆಯೊಂದಿಗೆ ಬೆಸೆದುಕೊಂಡಿರುವ ಸಂಸ್ಕೃತಿಗೂ ಸಂದ ಗೌರವವಾಗಿದೆ. ಯುನೆಸ್ಕೋ ದುರ್ಬಲ ಸ್ಥಿತಿಯಲ್ಲಿರುವ ಭಾಷೆ ಎಂದು ಗುರುತಿಸಿರುವ ತುಳುವನ್ನು ಉಳಿಸಿ ಬೆಳೆಸಲು ಸರ್ಕಾರದ ಈ ನಿರ್ಧಾರ ಪೂರಕವಾಗಿದೆ. ತುಳು ಭಾಷೆಯನ್ನು ಜನರಿಗೆ ಪರಿಚಯಿಸುವ ಮತ್ತು ವ್ಯಾಪಕವಾಗಿ ಪಸರಿಸುವ ನಿಟ್ಟಿನಲ್ಲಿ ಸಂಭಾಷಣ ತರಬೇತಿ ಮಹತ್ವದ ಪ್ರಯತ್ನವಾಗಿದೆ. ಈ ದಿಸೆಯಲ್ಲಿ ತುಳು ಸಾಹಿತ್ಯ ಅಕಾಡೆಮಿ ಹಾಗೂ ಮಾಹೆ ಅರ್ಥಪೂರ್ಣ ಹೆಜ್ಜೆ ಇರಿಸಿವೆ” ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ತುಳು ಭಾಷೆಗೆ ದೊರೆತಿರುವ ಮಾನ್ಯತೆಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ತುಳುವನ್ನು ಬೆಳೆಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ಬಾಸೆಲ್ ಮಿಷನ್ ಕಾಲದಿಂದ ಇಂದಿನವರೆಗೆ ತುಳು ಭಾಷೆ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸಲು ನಡೆದ ನಿರಂತರ ಪ್ರಯತ್ನಗಳ ಫಲವಾಗಿ ರಾಜ್ಯ ಸರ್ಕಾರದಿಂದ ಮಾನ್ಯತೆ ದೊರೆತಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್, ಹ್ಯುಮಾನಿಟೀಸ್ ಆ್ಯಂಡ್ ಆರ್ಟ್ಸ್ನ ನಿರ್ದೇಶಕಿ ಪ್ರೊ. ಗಾಯತ್ರಿ ಪ್ರಭು ಮಾತನಾಡಿ, ಶೈಕ್ಷಣಿಕ ವಲಯದಲ್ಲಿ ಸ್ಥಳೀಯ ಭಾಷೆ, ಸ್ಥಳೀಯ ಜ್ಞಾನ ಮತ್ತು ಸ್ಥಳೀಯ ಸಂಸ್ಕೃತಿಗಳಿಗೆ ಹೆಚ್ಚಿನ ಆದ್ಯತೆ ದೊರೆಯುತ್ತಿರುವ ಇಂದಿನ ಸಂದರ್ಭದಲ್ಲಿ ಮಾಹೆ ತುಳು ಭಾಷೆಯ ಅಧ್ಯಯನಕ್ಕೆ ವಿಶೇಷ ಮಹತ್ವ ನೀಡುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಲೇಖಕಿ ಡಾ. ನಿಕೇತನಾ, ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡಕ ಹಾಗೂ ಸಿಕೆಆರ್ಎಲ್ನ ಸಂಯೋಜಕ ಡಾ. ಪೃಥ್ವೀರಾಜ್ ಕವತ್ತಾರು ಉಪಸ್ಥಿತರಿದ್ದರು. ತುಳು ಸಂಭಾಷಣ ತರಗತಿಯ ವಿದ್ಯಾರ್ಥಿಗಳಾದ ಭಾಗ್ಯಜ್ಯೋತಿ, ಸೈಮನ್ ಥಾಮಸ್, ಅಭ್ಯುದಯ್ ಮತ್ತು ಮಾನಸಾ ಎಸ್. ತುಳು ನಾಟಕವನ್ನು ಪ್ರಸ್ತುತಪಡಿಸಿದರು. ಲೆಫ್ಟಿನೆಂಟ್ ಕರ್ನಲ್ ರಾಘವೇಂದ್ರ ಎಂ.ಕೆ., ಡಾ. ಆನಂದ್ ವಿ., ಶ್ರೀರಕ್ಷಾ ಭಂಡಾರ್ಕಾರ್ ಮತ್ತು ಸುಮಿತ್ ಕುಮಾರ್ ಸೇರಿದಂತೆ ಹಲವರು ತುಳು ತರಗತಿಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅಶ್ನಾ ಶೆಟ್ಟಿ ಸ್ವಾಗತಿಸಿದರು. ಸುವರ್ಣ ಪ್ರಾರ್ಥಿಸಿದರು. ಡಾ. ಮಾತಂಗಿ ಕುಮಾರ್ ಕಾರ್ಯಕ್ರಮ ಸಂಯೋಜಿಸಿದರು.


