ಉಡುಪಿ: ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಉಡುಪಿ ನಗರ ಪೊಲೀಸರು ಬಂಧಿಸಿ, ಸುಮಾರು 85 ಸಾವಿರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ಕಾಪು ತಾಲೂಕಿನ ಉದ್ಯಾವರ ಅಂಕುದ್ರು ನಿವಾಸಿ ವಿಜಯ್ ಅಲಿಯಾಸ್ ವಿಜಯ್ ಪೂಜಾರಿ (36) ಎಂದು ಗುರುತಿಸಲಾಗಿದೆ.

ಅ.17ರಂದು ರಾತ್ರಿ 10.30ರ ಸುಮಾರಿಗೆ ಉಡುಪಿ ನಗರದ ಅಜ್ಜರಕಾಡು ಭುಜಂಗ ಪಾರ್ಕ್ ಬಳಿ ವ್ಯಕ್ತಿಯೊಬ್ಬ ಸ್ಕೂಟರ್ನಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಭರತೇಶ್ ಕಂಕಣವಾಡಿ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸ್ಕೂಟರ್ನ ಡಿಕ್ಕಿಯಲ್ಲಿ ಮಾರಾಟಕ್ಕಾಗಿ ಮಾದಕ ವಸ್ತು ಇರಿಸಿಕೊಂಡಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯಿಂದ 17.66 ಗ್ರಾಂ ತೂಕದ 9 ಜಿಪ್ ಕವರ್ಗಳಲ್ಲಿದ್ದ ಆಂಫೆಟಮೈನ್/ಮೆಥಾಂಫೆಟಮೈನ್ ಮಾದಕ ವಸ್ತು, ಅಂದಾಜು 35 ಸಾವಿರ ಮೌಲ್ಯದ ಮಾದಕ ವಸ್ತು, ತೂಕದ ಯಂತ್ರ, ಖಾಲಿ ಜಿಪ್ ಕವರ್ಗಳು ಹಾಗೂ ಕಾಗದದಲ್ಲಿ ಸುತ್ತಿಡಲಾಗಿದ್ದ 2.18 ಗ್ರಾಂ ತೂಕದ ಬಣ್ಣದ ಮಾತ್ರೆ ಮತ್ತು ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, 8 ಸಾವಿರ ಮೌಲ್ಯದ ವಿವೋ ವೈ16 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು 40 ಸಾವಿರ ಮೌಲ್ಯದ ಸುಜುಕಿ ಆಕ್ಸೆಸ್ 125 ಸ್ಕೂಟರ್ನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 85 ಸಾವಿರ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಬಂಧಿತ ವಿಜಯ್ ಪೂಜಾರಿ ವಿರುದ್ಧ ಈ ಹಿಂದೆಯೂ ಉಡುಪಿ ಜಿಲ್ಲೆಯಲ್ಲಿ ಮಾದಕ ವಸ್ತುಗಳಿಗೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ 2026ರಲ್ಲಿ ಒಂದು ಪ್ರಕರಣ ಹಾಗೂ 2025ರಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಮತ್ತೊಂದು ಪ್ರಕರಣ ದಾಖಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿಯೂ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿ ಸೆ.24ರಂದು ಹಿರಿಯಡ್ಕ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ರತ್ನಾಕರ್ ಕೆ. ತನಿಖೆ ಕೈಗೊಂಡಿದ್ದಾರೆ. ಉಡುಪಿ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಪಿ. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಪಿಎಸ್ಐಗಳಾದ ಭರತೇಶ್ ಕಂಕಣವಾಡಿ, ರತ್ನಾಕರ್ ಕೆ. ಹಾಗೂ ಪೊಲೀಸ್ ಸಿಬ್ಬಂದಿಗಳಾದ ಜೀವನ್ ಕುಮಾರ್, ಆನಂದ ಗಾಣಿಗ, ಪ್ರಸನ್ನ ಸಿ., ಹೇಮಂತ್, ಓಬಳೇಶ ಆನಂದಯ್ಯ ಸೇರಿದಂತೆ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದಾರೆ.


