ಉಡುಪಿ : ನಗರದ ಮಲ್ಪೆ ಕಡಲತೀರದಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ವಿವಿಧ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ನಗರಸಭೆ, ಗೃಹರಕ್ಷಕ ದಳ, ಕರಾವಳಿ ಕಾವಲು ಪಡೆ, ಮಣಿಪಾಲ ತಾಂತ್ರಿಕ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು, ರಾಜ್ ಫಿಶ್ಮಿಲ್ ಹಾಗೂ ಕೊಚ್ಚಿನ್ ಶಿಪ್ಯಾರ್ಡ್ ಸಿಬ್ಬಂದಿ ಅಭಿಯಾನದಲ್ಲಿ ಪಾಲ್ಗೊಂಡು ಕಡಲತೀರವನ್ನು ಸ್ವಚ್ಛಗೊಳಿಸಿದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಸ್ವತಃ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಅಭಿಯಾನಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ‘ನಮ್ಮ ಉಡುಪಿ–ಸ್ವಚ್ಛ ಉಡುಪಿ’ ಲಾಂಛನವನ್ನು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ನಿಸರ್ಗದತ್ತವಾಗಿ ದೊರೆತಿರುವ ಸುಂದರ ಕಡಲತೀರಗಳನ್ನು ಸ್ವಚ್ಛ ಹಾಗೂ ಸುರಕ್ಷಿತವಾಗಿಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಪರಿಸರ ಸಂರಕ್ಷಣೆಯ ಪ್ರಯತ್ನಗಳು ಕೇವಲ ವಿಶೇಷ ದಿನಗಳಿಗೆ ಸೀಮಿತವಾಗದೆ ದೈನಂದಿನ ಬದುಕಿನ ಭಾಗವಾಗಬೇಕು ಎಂದರು.

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಮಲ್ಪೆ ಕಡಲತೀರದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಲು ಸ್ವಚ್ಛತೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಕಡಲತೀರದಲ್ಲಿ ಸ್ವಚ್ಛತೆ ಕಾಪಾಡುವುದರ ಜತೆಗೆ ಜಲಚರಗಳ ರಕ್ಷಣೆಯ ಬಗ್ಗೆಯೂ ಸಾರ್ವಜನಿಕರು ಕಾಳಜಿ ವಹಿಸಬೇಕು. ಸ್ವಚ್ಛ ಪರಿಸರದಿಂದ ಸಾರ್ವಜನಿಕರ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಹೇಳಿದರು.

ಪ್ಲಾಸ್ಟಿಕ್ನ ಅತಿಯಾದ ಬಳಕೆ ಹಾಗೂ ಅವೈಜ್ಞಾನಿಕ ವಿಲೇವಾರಿಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಹೀಗಾಗಿ ಕಡಲತೀರಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಸಾರ್ವಜನಿಕರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಸ್ವಚ್ಛತೆ ಕಾಪಾಡಬೇಕು. ಮುಂದಿನ ಪೀಳಿಗೆಗೆ ಸ್ವಚ್ಛ, ಸುರಕ್ಷಿತ ಹಾಗೂ ಸುಂದರ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಮಲ್ಪೆಯ ಗಾಂಧಿ ವೃತ್ತದ ಎಡ ಮತ್ತು ಬಲ ಭಾಗದಲ್ಲಿ ತಲಾ ಒಂದು ಕಿ.ಮೀ. ಸೇರಿದಂತೆ ಒಟ್ಟು ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ರೋಶನ್ ಕುಮಾರ್ ಶೆಟ್ಟಿ, ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.


