ಉಡುಪಿ: ಗ್ರಾಹಕನ ಸೋಗಿನಲ್ಲಿ ಅಂಗಡಿಗೆ ಬಂದ ಯುವಕನೊಬ್ಬ ಬಿಲ್ಲಿಂಗ್ ಕೌಂಟರ್ ಬಳಿಯಿದ್ದ ಮೊಬೈಲ್ ಕಳವು ಮಾಡಿ ಪರಾರಿಯಾದ ಘಟನೆ ಮಣಿಪಾಲದ ಲೇಕ್ ವ್ಯೂ ಕಟ್ಟಡದಲ್ಲಿರುವ ಅಭಿಜಿತ್ ಸ್ಟೋರ್ನಲ್ಲಿ ನಡೆದಿದೆ.

ಅಂಗಡಿಯಲ್ಲಿದ್ದ ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಬಂದ ಯುವಕ, ಬಿಲ್ಲಿಂಗ್ ಕೌಂಟರ್ ಬಳಿಯಿದ್ದ ಮೊಬೈಲ್ ಅನ್ನು ಯಾರ ಗಮನಕ್ಕೂ ಬಾರದಂತೆ ಎತ್ತಿಕೊಂಡು ಜೇಬಿನಲ್ಲಿಟ್ಟುಕೊಂಡಿದ್ದಾನೆ. ಬಳಿಕ ತಾನು ಖರೀದಿಸಿದ ವಸ್ತುಗಳಿಗೆ ಬಿಲ್ ಪಾವತಿಸಿ, ಏನೂ ನಡೆದಿಲ್ಲ ಎಂಬಂತೆ ಅಂಗಡಿಯಿಂದ ಹೊರಗೆ ತೆರಳಿದ್ದಾನೆ ಎನ್ನಲಾಗಿದೆ.

ಯುವಕನ ಚಾಕಚಕ್ಯತೆಯ ಕಳವು ಕೃತ್ಯ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೃಶ್ಯಾವಳಿಯಲ್ಲಿ ಯುವಕ ಮೊಬೈಲ್ ಎತ್ತಿಕೊಂಡು ಜೇಬಿನಲ್ಲಿಟ್ಟುಕೊಂಡಿರುವುದು ಕಂಡುಬಂದಿದೆ.

ಕಳವು ಮಾಡಿದ ಯುವಕನ ಚಹರೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ಆತನನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಅಂಗಡಿ ಮಾಲೀಕರು ಮನವಿ ಮಾಡಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


