ಉಡುಪಿ : ನಗರದ ಕೆನರಾ ಬ್ಯಾಂಕ್ ವೃತ್ತ ಹಾಗೂ ಕಲ್ಸಂಕ ಜಂಕ್ಷನ್‌ನಲ್ಲಿ ಫ್ರೀ ಲೆಫ್ಟ್ ಮಾರ್ಗವನ್ನು ಅಗಲೀಕರಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕೆನರಾ ಬ್ಯಾಂಕ್ ವೃತ್ತದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕ ಕಲ್ಪಿಸುವ ಸಿಗ್ನಲ್ ಬಳಿ ಈಗಾಗಲೇ ಫ್ರೀ ಲೆಫ್ಟ್ ವ್ಯವಸ್ಥೆ ಇದ್ದರೂ, ಅದರ ಅಗಲ ಕಡಿಮೆ ಇರುವುದರಿಂದ ವಾಹನಗಳು ಸುಗಮವಾಗಿ ಸಂಚರಿಸಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾರ್ಗವನ್ನು ಇನ್ನಷ್ಟು ಅಗಲೀಕರಿಸಿದರೆ ವಾಹನ ದಟ್ಟಣೆ ಕಡಿಮೆಯಾಗಿ ಸಂಚಾರ ಸುಗಮವಾಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಅದೇ ರೀತಿ ಕಲ್ಸಂಕ ಜಂಕ್ಷನ್‌ನಲ್ಲಿರುವ ಫ್ರೀ ಲೆಫ್ಟ್ ಮಾರ್ಗವನ್ನೂ ವಿಸ್ತರಿಸಿದರೆ ಉಡುಪಿಯಿಂದ ಗುಂಡಿಬೈಲು ಹಾಗೂ ದೊಡ್ಡಣ್ಣಗುಡ್ಡೆ ಭಾಗದತ್ತ ತೆರಳುವ ವಾಹನಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಸಿಗ್ನಲ್‌ನಲ್ಲಿ ಉಂಟಾಗುವ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಇದೇ ವೇಳೆ ಕೆನರಾ ಬ್ಯಾಂಕ್ ವೃತ್ತದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕಿಸುವ ರಸ್ತೆಯಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ನಿರ್ಮಿಸಿರುವ ಕಾಂಕ್ರೀಟ್ ದಿಬ್ಬವನ್ನು ತೆರವುಗೊಳಿಸುವಂತೆ ಆಗ್ರಹಿಸಲಾಗಿದೆ. ರಸ್ತೆ ಮಧ್ಯದಲ್ಲಿರುವ ಈ ದಿಬ್ಬದಿಂದ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದು, ವಾಹನಗಳನ್ನು ಜಿಗಿದು ಸಾಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ.

ಸಂಚಾರ ಸುರಕ್ಷತೆ ಮತ್ತು ವಾಹನ ದಟ್ಟಣೆ ನಿವಾರಣೆಯ ದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆ ಶೀಘ್ರ ಕ್ರಮ ಕೈಗೊಂಡು ಫ್ರೀ ಲೆಫ್ಟ್ ಮಾರ್ಗಗಳನ್ನು ಅಗಲೀಕರಿಸುವುದರ ಜೊತೆಗೆ ರಸ್ತೆಯಲ್ಲಿರುವ ಕಾಂಕ್ರೀಟ್ ದಿಬ್ಬವನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



