ಉಡುಪಿ : ಬ್ರಹ್ಮಾವರ ಸಮೀಪದ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಹುಲಿವೇಷ ಕಲಾವಿದರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತರನ್ನು ಸಂತೆಕಟ್ಟೆ ಲಕ್ಷ್ಮಿನಗರ ನಿವಾಸಿ ಮಂಜುನಾಥ್ (43) ಎಂದು ಗುರುತಿಸಲಾಗಿದೆ.

ಮಾಹಿತಿಯಂತೆ, ಸಂತೆಕಟ್ಟೆ ಲಕ್ಷ್ಮಿನಗರದ ಐವರು ಯುವಕರು ಗೋವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಇನ್ನೋವಾ ಕಾರಿನಲ್ಲಿ ಊರಿಗೆ ಹಿಂದಿರುಗುತ್ತಿದ್ದರು. ಈ ವೇಳೆ ಉಡುಪಿ ಕಡೆಗೆ ಸಂಚರಿಸುತ್ತಿದ್ದ ವೇಗದೂತ ಬಸ್ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ, ಹಿಂದಿನಿಂದ ಬರುತ್ತಿದ್ದ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಬಸ್ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಮಂಜುನಾಥ್ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಉಳಿದ ನಾಲ್ವರು ಯುವಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಂಜುನಾಥ್ ಅವರು ತುಳುನಾಡಿನ ಪ್ರಸಿದ್ಧ ಹುಲಿವೇಷ ಕಲಾವಿದರಾಗಿದ್ದು, ಹಲವು ವರ್ಷಗಳಿಂದ ಹುಲಿವೇಷ ತಂಡಗಳಿಗೆ ಪೈಂಟಿಂಗ್ ಹಾಗೂ ಕಲಾ ಸೇವೆ ಸಲ್ಲಿಸುವ ಮೂಲಕ ವಿಶೇಷ ಗುರುತಿಸಿಕೊಂಡಿದ್ದರು. ಅವರ ಅಕಾಲಿಕ ನಿಧನದಿಂದ ಹುಲಿವೇಷ ಕಲಾ ವಲಯದಲ್ಲಿ ತೀವ್ರ ಶೋಕ ಆವರಿಸಿದೆ.

ಘಟನೆಯ ಮಾಹಿತಿ ತಿಳಿದು ಬ್ರಹ್ಮಾವರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿಸಿದ್ದಾರೆ.


