ಉಡುಪಿ : ಬೈಂದೂರು ತಾಲೂಕಿನ ಪಡುವರಿ ಗ್ರಾಮದ ಮನೆಯಲ್ಲಿ ನಡೆದ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿ, ಅಂತರಾಜ್ಯ ಕಳ್ಳನನ್ನು ಬಂಧಿಸಿ, ಕಳವಾದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಕಾಪು ನಿವಾಸಿ ಅಂತರಾಜ್ಯ ಕಳ್ಳ ಉಮೇಶ್ ಬಳೆಗಾರ/ಉಮೇಶ್ ಪಿ/ಉಮೇಶ್ ರೆಡ್ಡಿ ಬಂಧಿತ ಆರೋಪಿ.

ಈತ ಬೈಂದೂರು–ಸೋಮೇಶ್ವರ ರಸ್ತೆಯಲ್ಲಿರುವ ಗುರುಕಿರಣ್ ಪಟ್ವಾಲ್ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ, ಮನೆಯ ಬಾಗಿಲು ಮುರಿದು ಒಳನುಗ್ಗಿ, ಕೋಣೆಯಲ್ಲಿದ್ದ ಗೋಡ್ರೇಜ್ ಅಲಮಾರಿಯಲ್ಲಿ ಇರಿಸಿದ್ದ ಚಿನ್ನಾಭರಣಗಳು ಮತ್ತು ನಗದು ಹಣವನ್ನು ಕಳವು ಮಾಡಿದ್ದ . ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ಏಪ್ರಿಲ್ 21ರಂದು ಅಂತರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನಿಖೆ ವೇಳೆ ಆರೋಪಿಯು ಕಳವು ಮಾಡಿದ ಚಿನ್ನಾಭರಣಗಳನ್ನು ತಮಿಳುನಾಡಿನ ಮದುರೈ ಪ್ರದೇಶದಲ್ಲಿ ಮಾರಾಟ ಮಾಡಲು ಗಟ್ಟಿಯಾಗಿ ಕರಗಿಸಿ ಬಚ್ಚಿಟ್ಟಿರುವುದಾಗಿ ತಿಳಿಸಿದ್ದನು. ಇದರ ಆಧಾರದಲ್ಲಿ ಪೊಲೀಸರು ಮದುರೈಗೆ ತೆರಳಿ, ಸುಮಾರು 2.81 ಲಕ್ಷ ಮೌಲ್ಯದ 22 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಉಮೇಶ್ ಬಳೆಗಾರ ಅಂತರಾಜ್ಯ ಮಟ್ಟದಲ್ಲಿ ಸಕ್ರಿಯ ಕಳ್ಳನಾಗಿದ್ದು, ಈತನ ವಿರುದ್ಧ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ವಿವಿಧ ಠಾಣೆಗಳಲ್ಲಿ ಒಟ್ಟು 36 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 8 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಇನ್ನೂ 23 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿ ಬಾಕಿ ಇವೆ. ಸದ್ಯ ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಮುಂದಿನ ತನಿಖೆ ಮುಂದುವರಿಸಲಾಗಿದೆ.



