ಉಡುಪಿ: ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಳಂಜೆ ದೊಡ್ಡಮನೆ ಪ್ರದೇಶದಲ್ಲಿ ಕಪ್ಪು ಚಿರತೆಯೊಂದು ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ದೊಡ್ಡಮನೆ ನಿವಾಸಿ ಗಣೇಶ್ ಶೆಟ್ಟಿ ಅವರ ಮನೆಯ ಹಟ್ಟಿಯ ಹಿಂಭಾಗದಲ್ಲಿ ಕಪ್ಪು ಚಿರತೆ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಇದರಿಂದ ಬೇಳಂಜೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಜನವಸತಿ ಪ್ರದೇಶದಲ್ಲಿ ಓಡಾಡುತ್ತಿರುವ ಚಿರತೆಯನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಸೆರೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಮುಖಂಡ ಅಮೃತ್ ಕುಮಾರ್ ಶೆಟ್ಟಿ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾತ್ರಿ ಹಾಗೂ ಮುಂಜಾನೆ ಸಮಯದಲ್ಲಿ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.


