ಉಡುಪಿ : ನವದೆಹಲಿಯ ವಸಂತ್ ಕುಂಜ್ನಲ್ಲಿರುವ ಶ್ರೀ ಪೇಜಾವರ ಮಠದ ಶಾಖೆ ವೇದವ್ಯಾಸ ಗುರುಕುಲದಲ್ಲಿ 39ನೇ ಚಾತುರ್ಮಾಸ್ಯ ವ್ರತದಲ್ಲಿರುವ ಜಗದ್ಗುರು ಶ್ರೀ ಮಧ್ವಾಚಾರ್ಯ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಭೇಟಿ ಮಾಡಿದರು.

ಸಂಜೆ ಸುಮಾರು 4.30ಕ್ಕೆ ಗುರುಕುಲಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ವಿದ್ಯಾರ್ಥಿಗಳ ವೇದಘೋಷ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಬಳಿಕ ಶ್ರೀ ಕೃಷ್ಣಧಾಮದಲ್ಲಿ ಶ್ರೀಕೃಷ್ಣ ದೇವರ ದರ್ಶನ ಪಡೆದು ಪಂಚದೀಪ ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ಸಂಸ್ಥಾನದ ಪಟ್ಟದ ದೇವರ ದರ್ಶನ ಹಾಗೂ ಶ್ರೀ ವಿಶ್ವೇಶತೀರ್ಥ ಸಂಸ್ಮರಣ ಧ್ಯಾನಮಂದಿರದಲ್ಲಿ ಪಾದುಕಾ ದರ್ಶನ ಪಡೆದರು.

ನಂತರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಫಲಪುಷ್ಪ ಸಮರ್ಪಿಸಿ ಸತ್ಕರಿಸಿದ ಅಮಿತ್ ಶಾ ಅವರು ಕೆಲಕಾಲ ಆಪ್ತ ಸಮಾಲೋಚನೆ ನಡೆಸಿದರು. ಈ ವೇಳೆ ಶ್ರೀಗಳು ಶಾಲು, ಪೇಟ, ಹಾರ ಹಾಗೂ ಸ್ಮರಣಿಕೆ ನೀಡಿ ಫಲಮಂತ್ರಾಕ್ಷತೆಯೊಂದಿಗೆ ಆಶೀರ್ವದಿಸಿದರು.

ಕಸ್ತೂರಿರಂಗನ್ ವರದಿಯನ್ನು ಆಧರಿಸಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವರದಿ ಜಾರಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ಜನರಲ್ಲಿ ಉಂಟಾಗಿರುವ ಆತಂಕ, ಭಯ ಹಾಗೂ ಗೊಂದಲಗಳನ್ನು ನಿವಾರಿಸಲು ಆದ್ಯತೆ ನೀಡಬೇಕು ಎಂದು ಪೇಜಾವರ ಶ್ರೀಗಳು ಅಮಿತ್ ಶಾ ಅವರಿಗೆ ಸಲಹೆ ನೀಡಿದ್ದಾರೆ.

ಈ ಕುರಿತು ಶ್ರೀಗಳು ಲಿಖಿತ ಪ್ರಸ್ತಾವನೆಯನ್ನೂ ಅಮಿತ್ ಶಾ ಅವರಿಗೆ ನೀಡಿದ್ದು, ಈ ವಿಚಾರವನ್ನು ಖಂಡಿತವಾಗಿ ಪರಿಶೀಲಿಸುವುದಾಗಿ ಗೃಹ ಸಚಿವರು ತಿಳಿಸಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಭೇಟಿಯ ಸಂದರ್ಭದಲ್ಲಿ ಸಂಸದರಾದ ಬಾನ್ಸುರಿ ಸ್ವರಾಜ್, ರಾಮವೀರ್ ಸಿಂಗ್ ಬಿಧೂರಿ, ಶಾಸಕರಾದ ಅನಿಲ್ ಶರ್ಮಾ, ಕೈಲಾಶ್ ಗೆಹ್ಲೋಟ್, ಡಿಡಿಎ ಸದಸ್ಯ ರಾಜೀವ್ ಬಬ್ಬರ್, ರಾಕೇಶ್ ಗೌರ್, ವಿದ್ವಾನ್ ಎನ್. ವಿಠಲ ಭಟ್, ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಭಟ್, ಅಶ್ವಿನ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


