ಉಡುಪಿ: ಕರ್ನಾಟಕದ ಪ್ರಾಚೀನ ಹಾಗೂ ಶ್ರೀಮಂತ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಗೆ ಕರ್ನಾಟಕದ ಹೆಚ್ಚುವರಿ ಎರಡನೇ ಅಧಿಕೃತ ರಾಜ್ಯಭಾಷೆಯ ಸ್ಥಾನಮಾನ ನೀಡಬೇಕು ಎಂದು ಅಳುಪ ವಂಶಸ್ಥ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಡಾ. ಆಕಾಶ್ ಜೈನ್ ಒತ್ತಾಯಿಸಿದರು. ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಲು ಕಾನೂನಿನಲ್ಲಿ ಅವಕಾಶವಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ಉದಾಹರಣೆಗಳಿವೆ. 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯ ಸಂದರ್ಭದಲ್ಲಿ ತುಳುವಿಗೂ ಪ್ರತ್ಯೇಕ ಪ್ರಾಂತ್ಯ ರಚಿಸುವ ಅವಕಾಶವಿತ್ತು. ಆದರೆ ತುಳುವರ ಮನವೊಲಿಸಿ, ಮುಂದಿನ ದಿನಗಳಲ್ಲಿ ಸೂಕ್ತ ಪ್ರಾತಿನಿಧ್ಯ ಹಾಗೂ ಸ್ಥಾನಮಾನ ಕಲ್ಪಿಸುವ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರಾಂತ್ಯದ ಬೇಡಿಕೆಯನ್ನು ಮುಂದೂಡಲಾಗಿತ್ತು ಎಂದರು.

ತುಳು ಮಹಾ ದ್ರಾವಿಡ ಪುರಾತನ ಭಾಷೆಯಾಗಿದ್ದು, ಕನ್ನಡದೊಂದಿಗೆ ಸಾವಿರಾರು ವರ್ಷಗಳ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯ ಹೊಂದಿದೆ. ಸ್ವಾತಂತ್ರ್ಯದ 80ನೇ ವರ್ಷಕ್ಕೆ ಕಾಲಿಡುತ್ತಿದ್ದರೂ ತುಳು ಭಾಷೆಗೆ ಇದುವರೆಗೆ ಸೂಕ್ತ ಸ್ಥಾನಮಾನ ದೊರೆಯದಿರುವುದು ವಿಷಾದನೀಯ. ತುಳುವನ್ನು ಕರ್ನಾಟಕದ ಅಧಿಕೃತ ಭಾಷೆಯಾಗಿ ಅಳವಡಿಸಿಕೊಂಡರೆ ಭಾಷೆಯ ಸಂರಕ್ಷಣೆ, ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಪೂರಕವಾದ ಕಾನೂನು ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.

ತುಳು ಭಾಷೆಯ ಉಳಿವು ಹಾಗೂ ಅಭಿವೃದ್ಧಿಗೆ ಸರ್ಕಾರದ ಅಧಿಕೃತ ಮಾನ್ಯತೆ ಮಹತ್ವದ ಹೆಜ್ಜೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಹೆಚ್ಚುವರಿ ಎರಡನೇ ಅಧಿಕೃತ ರಾಜ್ಯಭಾಷೆಯಾಗಿ ತುಳುವನ್ನು ಘೋಷಿಸುವ ಮೂಲಕ ತುಳುವರ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕು ಎಂದು ಡಾ. ಆಕಾಶ್ ಜೈನ್ ಆಗ್ರಹಿಸಿದರು.ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ್ ಎಕ್ಕಾರ್ ಮಾತನಾಡಿ, ತುಳು ಭಾಷೆಯನ್ನು ಕೇವಲ ಕರಾವಳಿ ಕರ್ನಾಟಕದಲ್ಲಷ್ಟೇ ಅಲ್ಲದೆ ವಿಶ್ವದ ವಿವಿಧೆಡೆ ಲಕ್ಷಾಂತರ ಮಂದಿ ಮಾತನಾಡುತ್ತಿದ್ದಾರೆ. ತುಳುವಿಗೆ ಕರ್ನಾಟಕದ ಹೆಚ್ಚುವರಿ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ದೊರೆಯುವಂತೆ ಎಲ್ಲರೂ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜೈ ತುಳುನಾಡು ಒಡಿಪು ಘಟಕದ ಅಧ್ಯಕ್ಷ ಸಂತೋಷ್ ಎನ್.ಎಸ್. ಕಟಪಾಡಿ, ಉಡುಪಿ ಸಿರಿ ತುಲು ಚಾವಡಿ ಕಾರ್ಯದರ್ಶಿ ಈಶ್ವರ್ ಶೆಟ್ಟಿ, ಕೋಶಾಧಿಕಾರಿ ಅಂಬಿಕಾ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



