ಉಡುಪಿ : ಜಿಲ್ಲೆಯ ಶಂಕರಪುರದ ಸುಭಾಷ್ ನಗರದಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ನಲ್ಲಿ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಕಾರಿನಲ್ಲಿ ಪರಾರಿಯಾದ ಘಟನೆ ನಡೆದಿದೆ. ಬಿಳಿ ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಕಾರಿನಲ್ಲಿ ಬಂದ ಮೂವರು ಯುವಕರು ವಾಹನಕ್ಕೆ ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿಕೊಂಡು, ಬಿಲ್ ಮಾಡುವಂತೆ ಸಿಬ್ಬಂದಿಗೆ ಸೂಚಿಸಿದ್ದರು. ಆದರೆ, ಸಿಬ್ಬಂದಿ ಬಿಲ್ ಸಿದ್ಧಪಡಿಸುವಷ್ಟರಲ್ಲಿ ಯಾವುದೇ ಹಣ ಪಾವತಿಸದೇ ಕಾರನ್ನು ಅತಿ ವೇಗದಲ್ಲಿ ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಖದೀಮರು ಸುಮಾರು ರೂ 4,711 ಮೌಲ್ಯದ ಡೀಸೆಲ್ ತುಂಬಿಸಿಕೊಂಡಿರುವುದಾಗಿ ತಿಳಿದುಬಂದಿದೆ. ಪೆಟ್ರೋಲ್ ಬಂಕ್ ಸಿಬ್ಬಂದಿ ನೀಡಿರುವ ಮಾಹಿತಿಯಂತೆ, ಕಾರಿನಲ್ಲಿದ್ದ ಮೂವರು ಯುವಕರು ತುಳು ಭಾಷೆಯನ್ನು ಸರಾಗವಾಗಿ ಮಾತನಾಡುತ್ತಿದ್ದರು. ತಾವು ಕುಮಟಾದವರು ಎಂದು ಹೇಳಿಕೊಂಡಿದ್ದರೂ, ಅದು ಸುಳ್ಳಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಅವರು ಮದ್ಯಪಾನ ಮಾಡಿರುವ ಸಾಧ್ಯತೆಯಿದ್ದು, ವಾಹನದೊಳಗೆ ಬಿಯರ್ ಬಾಟಲಿ ಹಾಗೂ ಚಿಪ್ಸ್ಗಳು ಕಂಡುಬಂದಿವೆ.

ಕಾರಿಗೆ ಟಿಂಟೆಡ್ ಗ್ಲಾಸ್ ಅಳವಡಿಸಲಾಗಿದ್ದು, ಸಿಸಿಟಿವಿ ದೃಶ್ಯಗಳಲ್ಲಿ ವಾಹನದ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಗೋಚರಿಸಿಲ್ಲ. ಈ ಸಂಬಂಧ ಪೆಟ್ರೋಲ್ ಬಂಕ್ ಸಿಬ್ಬಂದಿ ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.




