Sunday, October 25, 2026

spot_img

ಕೆರೆಯಲ್ಲಿ ಮುಳುಗಿ ಇಬ್ಬರು ಶಾಲಾ ವಿದ್ಯಾರ್ಥಿನಿಯರ ಸಾವು

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಭಾನುವಾರ ಸರಣಿ ದುರಂತಗಳು ಸಂಭವಿಸಿದ್ದು, ಸಂಜೆ ವೇಳೆಗೆ ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ ಸಮೀಪದ ಹೊಸಾಡು ಗ್ರಾಮದ ಕೆರೆಯಲ್ಲಿ ಮುಳುಗಿ ಇಬ್ಬರು ಶಾಲಾ ವಿದ್ಯಾರ್ಥಿನಿಯರು ಮೃತಪಟ್ಟ ಘಟನೆ ಇಡೀ ಪ್ರದೇಶವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಮೃತ ಬಾಲಕಿಯರನ್ನು ಮುಳ್ಳಿಕಟ್ಟೆ ಹೆದ್ದಾರಿ ಪಕ್ಕದ ಜೋಪಡಿಯಲ್ಲಿ ವಾಸವಾಗಿದ್ದ, ಮೂಲತಃ ಹಾವೇರಿ ಜಿಲ್ಲೆಯವರಾದ ವೈಶಾಲಿ ಮತ್ತು ಸುನಿತಾ ಎಂದು ಗುರುತಿಸಲಾಗಿದೆ. ಇಬ್ಬರೂ ಸಮೀಪದ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದರು ಎಂದು ತಿಳಿದುಬಂದಿದೆ.

ಬಟ್ಟೆ ಒಗೆಯಲು ಹಾಗೂ ಸ್ನಾನ ಮಾಡಲು ಕೆರೆಗೆ ತೆರಳಿದ್ದ ಸಂದರ್ಭದಲ್ಲಿ ಬಾಲಕಿಯರು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿದ್ದು, ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ, ಕುಂದಾಪುರ ಅಗ್ನಿಶಾಮಕ ದಳ, ದಿನೇಶ್ ಖಾರ್ವಿ ನೇತೃತ್ವದ ತಂಡ ಹಾಗೂ ಟೀಮ್ ಎಚ್‌ಐ ತುರ್ತು ಸ್ಪಂದನಾ ತಂಡದ ಸದಸ್ಯರು ಕಾರ್ಯಾಚರಣೆಗೆ ಕೈಜೋಡಿಸಿದರು.

ಘಟನಾ ಸ್ಥಳಕ್ಕೆ ಆಂಬುಲೆನ್ಸ್, ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರ ತಂಡಗಳು ತಲುಪಲು ಸಾಕಷ್ಟು ಹರಸಾಹಸ ಪಡಬೇಕಾಯಿತು. ಬಳಿಕ ದಿನೇಶ್ ಖಾರ್ವಿ ಅವರ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಬಾಲಕಿಯರ ಮೃತದೇಹಗಳನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ.

ಮೃತದೇಹಗಳನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದ ಶೀತಲೀಕರಣ ಘಟಕಕ್ಕೆ ರವಾನಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಪೋಷಕರು, ಕುಟುಂಬಸ್ಥರು ಹಾಗೂ ಸ್ಥಳೀಯರ ಆಕ್ರಂದನ ಮುಗಿಲು ಮುಟ್ಟಿದ್ದು, ಬಾಲಕಿಯರ ಅಕಾಲಿಕ ಸಾವು ಎಲ್ಲರನ್ನೂ ದುಃಖದ ಮಡುವಿನಲ್ಲಿ ಮುಳುಗಿಸಿದೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲೆಯಲ್ಲಿ ಒಂದೇ ದಿನ ಸರಣಿ ದುರಂತಗಳು

ಭಾನುವಾರದ ಮುಂಜಾನೆ ಬೈಂದೂರು ತಾಲೂಕಿನ ಅರಾಟೆ ಸೇತುವೆ ಬಳಿ ಎರಡು ಖಾಸಗಿ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ 26 ಮಂದಿ ಗಾಯಗೊಂಡಿದ್ದರು. ಬಳಿಕ ಕುಂದಾಪುರ ತಾಲೂಕಿನ ಶಾನಾಡಿ ಕೊರಗ ಕಾಲನಿಯಲ್ಲಿ ತಾಯಿ ಮತ್ತು ಮಗಳ ಸಾವಿನ ಆಘಾತಕಾರಿ ಘಟನೆ ವರದಿಯಾಗಿತ್ತು. ಸಂಜೆ ವೇಳೆಗೆ ಹೊಸಾಡು ಗ್ರಾಮದ ಕೆರೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟಿರುವುದು ಜಿಲ್ಲೆಯಲ್ಲಿ ಕರಾಳ ದಿನವಾಗಿ ಪರಿಣಮಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles