Monday, May 18, 2026

spot_img

ಕೆಡಿಪಿ ಸಭೆಯಲ್ಲಿ ಪ್ರೊಟೋಕಾಲ್ ವಿವಾದ ಕಾವು: ಶಾಸಕರ ಆಕ್ರೋಶಕ್ಕೆ ಗರಂ ಆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ : ಜಿಲ್ಲಾ ಪಂಚಾಯತ್ ಸಭಾಂಗಣ ದಲ್ಲಿ ಶನಿವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರೊಟೋಕಾಲ್ ವಿಚಾರ ಭಾರೀ ಗದ್ದಲಕ್ಕೆ ಕಾರಣವಾಯಿತು. ಜಿಲ್ಲೆಯ ವಿವಿಧ ಕ್ಷೇತ್ರಗಳ ಶಾಸಕರು ಅಧಿಕಾರಿಗಳ ವಿರುದ್ಧ ಸರಣಿ ಆರೋಪಗಳನ್ನು ಮಾಡುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೆಂಡಾಮಂಡಲರಾದ ಘಟನೆ ನಡೆಯಿತು.

ಸಭೆ ಆರಂಭವಾಗುತ್ತಿದ್ದಂತೆಯೇ ಜಿಲ್ಲೆಯ ಐದು ಕ್ಷೇತ್ರಗಳ ಶಾಸಕರು ಅಧಿಕಾರಿಗಳ ಕಾರ್ಯವೈಖರಿಯನ್ನು ತೀವ್ರವಾಗಿ ಪ್ರಶ್ನಿಸಿದರು. ಸರ್ಕಾರಿ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯಲ್ಲಿ ಶಾಸಕರು ಹಾಗೂ ಸಚಿವರ ಹೆಸರನ್ನು ಕೈಬಿಡಲಾಗುತ್ತಿದೆ. ಕೇವಲ ವಾಟ್ಸಾಪ್ ಹಾಗೂ ಇ-ಮೇಲ್ ಮೂಲಕ ಆಹ್ವಾನ ಕಳುಹಿಸಿ ನಾಮಕಾವಸ್ತೆಗೆ ಪ್ರೊಟೋಕಾಲ್ ಪಾಲಿಸಲಾಗುತ್ತಿದೆ ಎಂದು ಆರೋಪಿಸಿದರು.

ಪ್ರೊಟೋಕಾಲ್ ಪ್ರಕಾರ ಶಾಸಕರಿಗೆ ದೂರವಾಣಿ ಕರೆ ಮಾಡಿ ಆಹ್ವಾನಿಸಬೇಕು. ಆದರೆ ಅಧಿಕಾರಿಗಳು ಜನಪ್ರತಿನಿಧಿಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಹಕ್ಕುಪತ್ರ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸ್ಥಳೀಯ ಶಾಸಕರ ಗಮನಕ್ಕೆ ತಾರದೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಕಾರ್ಕಳ ಶಾಸಕ ಸುನೀಲ್‌ ಕುಮಾರ್,  ಕಾರ್ಕಳದಲ್ಲಿ ಕಾಂಗ್ರೆಸ್ ಕಚೇರಿಯಲ್ಲೇ ಹಕ್ಕುಪತ್ರ ವಿತರಣೆ ನಡೆದಿದೆ. ಕಾಂಗ್ರೆಸ್ ಪಕ್ಷದ ವಕ್ತಾರರ ಮಾತು ನಡೆಯುತ್ತದೆ. ಆದರೆ ಶಾಸಕರ ಮಾತು ನಡೆಯುತ್ತಿಲ್ಲ ಎಂದು ಕಿಡಿಕಾರಿದರು.

ಸಭೆಯಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಜಿಲ್ಲಾಡಳಿತದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿ, ಮೊದಲು ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಶಾಸಕರ ಸರಣಿ ಆರೋಪ ಹಾಗೂ ಆಕ್ರೋಶದಿಂದ ತಾಳ್ಮೆ ಕಳೆದುಕೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಥಳದಲ್ಲೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಆಮಂತ್ರಣ ಪತ್ರಿಕೆಯಲ್ಲಿ ಸಚಿವರು ಹಾಗೂ ಶಾಸಕರ ಹೆಸರನ್ನು ಕೈಬಿಟ್ಟ ಆರೋಪದ ಹಿನ್ನೆಲೆ ಕಾರ್ಕಳ ತಹಶೀಲ್ದಾರ್ ಪ್ರದೀಪ್ ಜಿ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಪೂರ್ಣಿಮಾ ಅವರಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿದರು. ಇದು ಕೊನೆಯ ಎಚ್ಚರಿಕೆ. ಮತ್ತೊಮ್ಮೆ ಪ್ರೊಟೋಕಾಲ್ ಉಲ್ಲಂಘನೆ ನಡೆದರೆ ಸ್ಥಳದಲ್ಲೇ ಅಮಾನತು ಮಾಡಲಾಗುವುದು ಎಂದು ಸಚಿವೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

 ಸಭೆಯಲ್ಲಿ ಈ ಹಿಂದೆ ಕಂಬಳ ಗದ್ದೆ ಗುದ್ದಲಿ ಪೂಜೆ ಸಂದರ್ಭ ನಿಷೇಧಾಜ್ಞೆ ಜಾರಿ ಮಾಡಿ ಶಾಸಕರು ಹಾಗೂ ಸಂಸದರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ವಿಚಾರವೂ ಪ್ರಸ್ತಾಪವಾಯಿತು. ಗಲಾಟೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಶಾಂತಿಯುತವಾಗಿ ಭೂಮಿ ಪೂಜೆ ಮಾಡಿದವರ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ ಎಂದು ಕಾಪು ಶಾಸಕ ಸುರೇಶ್‌ ಶೆಟ್ಟಿ ಗುರ್ಮೆ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ವಿಧಾನಪರಿಷತ್ ಸದಸ್ಯ ಭೋಜೆಗೌಡ ಕೂಡ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡು, ಕಾನೂನು ಸರಿಯಾಗಿ ಪಾಲನೆಯಾಗಿಲ್ಲ ಎಂದು ಹೇಳಿದರು. ಎಫ್‌ಐಆರ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಫ್‌ಐಆರ್ ಅನ್ನೋದು ನಮಗೆಲ್ಲ ಪಾರಿತೋಷಕ ಇದ್ದಂತೆ ಎಂದು ಲೇವಡಿ ಮಾಡಿದರು.

ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಕೆಡಿಪಿ ಸಭೆಯಲ್ಲಿ ಪತ್ರಕರ್ತರನ್ನು ಸಭೆಯಿಂದ ಹೊರಗಿಡುವ ಪ್ರಯತ್ನ ನಡೆಯಿತು. ಈ ವೇಳೆ ಟಿವಿ ಮಾಧ್ಯಮದ ಪತ್ರಕರ್ತರು ಕೆಡಿಪಿ ಸಭೆಯಿಂದ ಹೊರಗೆ ನಡೆಯಲು ಸಾಧ್ಯವಿಲ್ಲವೆಂದು ಪಟ್ಟು ಹಿಡಿದರು. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಕೆಡಿಪಿ ಸಭೆಯಲ್ಲಿ ಪತ್ರಕರ್ತರು ಭಾಗವಹಿಸಲು ಅವಕಾಶ ನೀಡಲಾಗುತ್ತದೆ ಆದರೆ ಉಡುಪಿ ಜಿಲ್ಲೆಯಲ್ಲಿ ಕೆಡಿಪಿ ಸಭೆಯಲ್ಲಿ ಪತ್ರಕರ್ತರನ್ನು ಹೊರಗಿಟ್ಟು ಸಭೆ ನಡೆಸುವ ಶಿಷ್ಟಾಚಾರವಿದೆ ಈ ರೀತಿ ಮಾಡುವಂತೆ ಎಲ್ಲಿಯಾದರೂ ಆದೇಶವಿದ್ದರೆ ತಿಳಿಸಿ ಎಂದು ಪತ್ರಕರ್ತರು ಆಕ್ರೋಶ ಹೊರ ಹಾಕಿದರು. ಅಧಿಕಾರಿಗಳು ಮನವೊಲಿಸುವ ಯತ್ನ ನಡೆಸಿ ವಿಫಲರಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಭೆಯಲ್ಲಿ ಪತ್ರಕರ್ತರು ಕುಳಿತುಕೊಳ್ಳಲು ವ್ಯವಸ್ಥೆ ಮಾಡುವಂತೆ ಆದೇಶಿಸಿದ್ದರು. ಮುಂದಿನ ಸಭೆಯಲ್ಲಿ ಪತ್ರಕರ್ತರು ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles