ಉಡುಪಿ : ಉಡುಪಿ ನಗರಸಭೆ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಜನರಿಗೆ ತಲುಪಿಸುವಲ್ಲಿ ಪತ್ರಕರ್ತರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಉಡುಪಿ ನಗರಸಭೆ ಪೌರಾಯುಕ್ತ ಹಂಗರಗಿ ಹೇಳಿದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾದ ತಿಂಗಳ ಅಂಗಳ ಸಂವಾದ ಕಾರ್ಯಕ್ರಮದಲ್ಲಿ ಸಂಘದ ‘ಸನ್ಮತಿ’ ಪತ್ರಿಕೆಯ ಏಪ್ರಿಲ್ ತಿಂಗಳ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ನಗರಸಭೆಯ ವಿವಿಧ ಯೋಜನೆಗಳು, ಸಾರ್ವಜನಿಕರ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಧ್ಯಮಗಳು ನಿರಂತರವಾಗಿ ವರದಿ ಮಾಡುವ ಮೂಲಕ ಆಡಳಿತ ಮತ್ತು ಸಾರ್ವಜನಿಕರ ನಡುವಿನ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ. ಪತ್ರಕರ್ತರು ಜನರ ಸಮಸ್ಯೆಗಳನ್ನು ನಗರಸಭೆಯ ಗಮನಕ್ಕೆ ತರುವ ಮೂಲಕ ಸಮಾಜಮುಖಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ವಹಿಸಿದ್ದರು. ವಾರ್ತಾಧಿಕಾರಿ ಮಂಜುನಾಥ್, ಸಂಘದ ಕೋಶಾಧಿಕಾರಿ ಹರೀಶ್ ಕುಂದರ್ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



