ಉಡುಪಿ: ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ಸಂಯಮ, ಸೌಜನ್ಯ ಮತ್ತು ಜನಪ್ರತಿನಿಧಿಗೆ ತಕ್ಕ ಜವಾಬ್ದಾರಿಯುತ ನಡವಳಿಕೆಯನ್ನು ಪಾಲಿಸಬೇಕು ಎಂದು ನ್ಯಾಯವಾದಿ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ್ ಕುಂದರ್ ಕಲ್ಗದ್ದೆ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಉಡುಪಿ ಜಿಲ್ಲೆಯ ಜನತೆ ತಮ್ಮ ಶಾಸಕರಿಂದ ಅಭಿವೃದ್ಧಿ ಪರ ಚಿಂತನೆ, ಸಭ್ಯ ರಾಜಕೀಯ ಸಂಸ್ಕೃತಿ ಹಾಗೂ ಜವಾಬ್ದಾರಿಯುತ ಭಾಷಣವನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ ಸಾರ್ವಜನಿಕ ಸಭೆಯಲ್ಲಿ ಶಾಸಕ ಯಶ್ಪಾಲ್ ಸುವರ್ಣ ಅವರು ಬಳಸುತ್ತಿರುವ ಭಾಷೆ ಜನಪ್ರತಿನಿಧಿಯ ಘನತೆಗೆ ತಕ್ಕಂತಿಲ್ಲ. ಜನಪ್ರತಿನಿಧಿಯಾಗಿ ಆಯ್ಕೆಯಾದ ನಂತರ ರಾಜಕೀಯ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವಾಗಲೂ ಮಾತಿನ ಮಿತಿ ಹಾಗೂ ಸಂಸದೀಯ ಸಂಸ್ಕೃತಿಯನ್ನು ಪಾಲಿಸುವುದು ಅಗತ್ಯವಾಗಿದೆ. ಹಿಂದೆ ನಿಮ್ಮ ಹಿನ್ನೆಲೆ ಎನೇ ಇದ್ದರೂ, ಇಂದು ಉಡುಪಿ ಜಿಲ್ಲೆಯ ಶಾಸಕರಾಗಿರುವ ಕಾರಣ ಆ ಹುದ್ದೆಯ ಘನತೆ ಮತ್ತು ಜವಾಬ್ದಾರಿಯನ್ನು ಸದಾ ಮನದಲ್ಲಿಟ್ಟುಕೊಂಡು ನಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಪ್ರತಿಯೊಂದು ಭಾಷಣದ ಆರಂಭದಲ್ಲಿ ಶ್ರೀಕೃಷ್ಣನ ಹೆಸರನ್ನು ಸ್ಮರಿಸುವುದು ಉತ್ತಮ ಸಂಪ್ರದಾಯ. ಆದರೆ ಅದಕ್ಕೆ ತಕ್ಕಂತೆ ಸಮಾಜದಲ್ಲಿ ಸೌಹಾರ್ದ, ಸಂಸ್ಕಾರ ಮತ್ತು ಶಾಂತಿಯನ್ನು ಬೆಳೆಸುವ ಮಾತುಗಳನ್ನೂ ಆಡಬೇಕು. ದೇವರ ಹೆಸರನ್ನು ಉಚ್ಚರಿಸುವುದಷ್ಟೇ ಅಲ್ಲ, ಅವರ ಆದರ್ಶಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದು ಮುಖ್ಯ. ರಾಜಕೀಯ ವಿರೋಧಿಗಳನ್ನು ಟೀಕಿಸುವ ಹಕ್ಕು ಪ್ರತಿಯೊಬ್ಬ ನಾಯಕರಿಗೂ ಇದೆ. ಆದರೆ ವೈಯಕ್ತಿಕ ನಿಂದನೆ, ಅವಹೇಳನಕಾರಿ ಪದಗಳ ಬಳಕೆ ಹಾಗೂ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವಲ್ಲ. ದೇಶದ ಸ್ವಾತಂತ್ರ್ಯ ಹೋರಾಟ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿರುವ ನೆಹರೂ–ಗಾಂಧಿ ಕುಟುಂಬದ ಬಗ್ಗೆ ಅವಹೇಳನಕಾರಿ ಭಾಷೆ ಬಳಸುವುದು ಸೂಕ್ತವಲ್ಲ ಎಂದಿದ್ದಾರೆ.

ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಗಳು ಬಳಸುವ ಪ್ರತಿಯೊಂದು ಪದವೂ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ವೈಯಕ್ತಿಕ ದ್ವೇಷ ಅಥವಾ ರಾಜಕೀಯ ಕಟುವಿಗಿಂತ ಸಂಯಮ, ಸಭ್ಯತೆ ಮತ್ತು ಜವಾಬ್ದಾರಿಯುತ ಭಾಷೆಯೇ ಜನಪ್ರತಿನಿಧಿಯ ನಿಜವಾದ ಶಕ್ತಿಯಾಗಬೇಕು. ಉಡುಪಿ ಜಿಲ್ಲೆಯ ಜನತೆ ಪ್ರಚೋದನಕಾರಿ ಹೇಳಿಕೆಗಳನ್ನು ಅಲ್ಲ, ಅಭಿವೃದ್ಧಿ ವಿಚಾರಗಳು, ಜನಪರ ಕೆಲಸಗಳು ಮತ್ತು ಎಲ್ಲರಿಗೂ ಗೌರವ ನೀಡುವ ರಾಜಕೀಯ ಸಂಸ್ಕೃತಿಯನ್ನು ನಿರೀಕ್ಷಿಸುತ್ತಿದ್ದಾರೆ. ಭವಿಷ್ಯದಲ್ಲಿ ಶಾಸಕ ಯಶ್ಪಾಲ್ ಸುವರ್ಣ ಅವರು ತಮ್ಮ ಭಾಷೆಯಲ್ಲಿ ಸಂಯಮ ಪಾಲಿಸಿ, ಶಾಸಕ ಸ್ಥಾನಕ್ಕೆ ತಕ್ಕ ಗೌರವ ಮತ್ತು ಘನತೆಯನ್ನು ಉಳಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.


