ಉಡುಪಿ: ಉಡುಪಿ–ಮಣಿಪಾಲ ರಸ್ತೆಯ ಹಯಗ್ರೀವ ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 169(ಎ) ಮೇಲೆ ಬೃಹತ್ ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಸಂಭವಿಸಿದೆ. ಉಡುಪಿ ನಗರದಲ್ಲಿ ಸುರಿದ ಭಾರೀ ಗಾಳಿ-ಮಳೆಯ ಪರಿಣಾಮ ರಸ್ತೆ ಬದಿಯ ಮರದ ದೊಡ್ಡ ಕೊಂಬೆ ತುಂಡಾಗಿ ನೇರವಾಗಿ ಹೆದ್ದಾರಿಯ ಮೇಲೆ ಬಿದ್ದಿದ್ದು, ಇದರಿಂದ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಯಿತು. ವಾಹನ ಸವಾರರು ಕೆಲಕಾಲ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡರು. ಬಳಿಕ ಮರದ ಕೊಂಬೆಯನ್ನು ಕತ್ತರಿಸಿ ರಸ್ತೆಯಿಂದ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು. ಮರದ ಕೊಂಬೆಯನ್ನು ಸಂಪೂರ್ಣ ತೆರವುಗೊಳಿಸಿದ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಪುನಃ ಸುಗಮಗೊಳಿಸಲಾಯಿತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ.

ಭಾರೀ ಗಾಳಿ-ಮಳೆಯ ಹಿನ್ನೆಲೆಯಲ್ಲಿ ರಸ್ತೆ ಬದಿಯ ಮರಗಳ ಬಳಿ ಸಂಚರಿಸುವಾಗ ವಾಹನ ಸವಾರರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.


