Wednesday, July 1, 2026

spot_img

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ: ಮನೆ-ಮನೆಗೆ ಬಿಎಲ್‌ಒ ಭೇಟಿ

ಉಡುಪಿ : ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಆರಂಭವಾಗಿದ್ದು, ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ-ಮನೆಗೆ ಭೇಟಿ ನೀಡಿ ಎನ್ಯೂಮರೇಷನ್ ಫಾರ್ಮ್‌ಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ನಗರದ ಇಂದ್ರಾಳಿ, ಕುಂಜಿಬೆಟ್ಟು, ಕಾಡಬೆಟ್ಟು, ಪಣಿಯಾಡಿ ಸೇರಿದಂತೆ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಕಾರ್ಯದ ಪ್ರಗತಿಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ವಿಶೇಷ ಸಮಗ್ರ ಪರಿಷ್ಕರಣೆಯ ಮುಖ್ಯ ಉದ್ದೇಶ ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವುದಾಗಿದೆ. ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ದಾಖಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು ಈ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಜೂನ್ 30ರಿಂದ ಜುಲೈ 29ರವರೆಗೆ ಬಿಎಲ್‌ಒಗಳು ಮನೆ-ಮನೆಗೆ ಭೇಟಿ ನೀಡಿ ಎನ್ಯೂಮರೇಷನ್ ಫಾರ್ಮ್‌ಗಳನ್ನು ವಿತರಿಸಿ, ಸಾರ್ವಜನಿಕರಿಂದ ಭರ್ತಿ ಮಾಡಿದ ನಮೂನೆಗಳು, ಇತ್ತೀಚಿನ ಭಾವಚಿತ್ರ ಹಾಗೂ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ. ಭರ್ತಿ ಮಾಡಿದ ನಮೂನೆಗಳಲ್ಲಿ ಮತದಾರರ ಸಹಿ ಅಥವಾ ಹೆಬ್ಬೆರಳ ಗುರುತು ಕಡ್ಡಾಯವಾಗಿರಬೇಕು ಎಂದು ಅವರು ತಿಳಿಸಿದರು.

ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಸಾರ್ವಜನಿಕರಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಪರಿಶೀಲನೆ ಪೂರ್ಣಗೊಂಡ ಬಳಿಕ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಸಗ್ರಿ ವಾರ್ಡ್‌ನ ಬಿಎಲ್‌ಒ ಪ್ರಮೋದಾ ಮಾತನಾಡಿ, ಪ್ರತಿ ಮನೆಗೆ ಎರಡು ಎನ್ಯೂಮರೇಷನ್ ಫಾರ್ಮ್‌ಗಳನ್ನು ನೀಡಲಾಗುತ್ತಿದೆ. ಮತದಾರರು ಎರಡನ್ನೂ ಭರ್ತಿ ಮಾಡಿ ಭಾವಚಿತ್ರ ಅಂಟಿಸಿ ಸಹಿ ಮಾಡಿ, ಒಂದು ಪ್ರತಿಯನ್ನು ಬಿಎಲ್‌ಒಗಳಿಗೆ ಸಲ್ಲಿಸಿ, ಮತ್ತೊಂದು ಪ್ರತಿಗೆ ಸ್ವೀಕೃತಿ ಪಡೆದು ತಮ್ಮ ಬಳಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಮನೆಗೆ ಭೇಟಿ ನೀಡಿದಾಗ ನಿವಾಸಿಗಳು ಫಾರ್ಮ್ ಸ್ವೀಕರಿಸಿದರೆ ನೇರಳೆ ಬಣ್ಣದ ಚೌಕಾಕಾರದ ಸ್ಟಿಕ್ಕರ್, ಮನೆಗೆ ಬೀಗ ಹಾಕಿದ್ದರೆ ಕೆಂಪು ಬಣ್ಣದ ವೃತ್ತಾಕಾರದ ಸ್ಟಿಕ್ಕರ್ ಅಂಟಿಸಲಾಗುವುದು ಎಂದೂ ಅವರು ವಿವರಿಸಿದರು. ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಮೌಲ ಅವರು ಮಾತನಾಡಿ, ಬಿಎಲ್‌ಒಗಳು ತಮ್ಮ ಮನೆಗೆ ಭೇಟಿ ನೀಡಿ ಎನ್ಯೂಮರೇಷನ್ ಫಾರ್ಮ್ ವಿತರಿಸಿದ್ದು, ಅಗತ್ಯ ದಾಖಲೆಗಳೊಂದಿಗೆ ಅದನ್ನು ಭರ್ತಿ ಮಾಡಿ ಸಲ್ಲಿಸುವುದಾಗಿ ಹಾಗೂ ತಮ್ಮ ಕುಟುಂಬದ ಸದಸ್ಯರ ಹೆಸರುಗಳು ಮತದಾರರ ಪಟ್ಟಿಯಲ್ಲಿ ದಾಖಲಾಗಿದೆಯೇ ಎಂಬುದನ್ನು ಪರಿಶೀಲಿಸಿರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಉಡುಪಿ ತಾಲೂಕು ತಹಶೀಲ್ದಾರ್ ಗುರುರಾಜ್ ಸೇರಿದಂತೆ ಜಿಲ್ಲಾ ಚುನಾವಣಾ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles