ಉಡುಪಿ : ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ವಿವಿಧೆಡೆ ಮರಗಳು ಉರುಳಿ ಬಿದ್ದ ಪರಿಣಾಮ ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಜಾನುವಾರು ಕೊಟ್ಟಿಗೆಯೊಂದರ ಮೇಲೂ ಮರ ಬಿದ್ದು ಹಾನಿ ಸಂಭವಿಸಿದೆ. ಆದರೆ ಜಿಲ್ಲೆಯಲ್ಲಿ ಯಾವುದೇ ಮಾನವ ಜೀವಹಾನಿ, ಜಾನುವಾರು ಜೀವಹಾನಿಯಾಗಿಲ್ಲ.

ಜಿಲ್ಲಾಡಳಿತದ ಮಳೆ ಹಾನಿ ಕುರಿತ ಪ್ರಾಥಮಿಕ ವರದಿ ಪ್ರಕಾರ, ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮದಲ್ಲಿ ಜಾನಕಿ ಶೆಡ್ತಿ ಅವರ ಮನೆಯ ಮೇಲೆ ಮರ ಬಿದ್ದು ಸುಮಾರು 40 ಸಾವಿರ ಮೌಲ್ಯದ ಹಾನಿಯಾಗಿದೆ. ಬೈಂದೂರು ತಾಲೂಕಿನ ಬೈಂದೂರು ಗ್ರಾಮದಲ್ಲಿ ನಾರಾಯಣ ಅವರ ಮನೆಗೆ ಮರ ಬಿದ್ದು ಸುಮಾರು 50 ಸಾವಿರ ನಷ್ಟ ಉಂಟಾಗಿದೆ. ಕಾಪು ತಾಲೂಕಿನ ಮಜೂರು ಗ್ರಾಮದಲ್ಲಿ ಪುಷ್ಪ ಮೂಲ್ಯ ಅವರ ಮನೆಯ ಮೇಲೂ ಮರ ಬಿದ್ದು ಸುಮಾರು 30 ಸಾವಿರ ಮೌಲ್ಯದ ಭಾಗಶಃ ಹಾನಿಯಾಗಿದೆ.

ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದಲ್ಲಿ ರಾಮ ಬಂಗೇರ ಅವರ ಜಾನುವಾರು ಕೊಟ್ಟಿಗೆಯ ಮೇಲೆ ಮರ ಬಿದ್ದ ಪರಿಣಾಮ ಸುಮಾರು 50 ಸಾವಿರ ಮೌಲ್ಯದ ಹಾನಿ ಸಂಭವಿಸಿದೆ.ಜೂನ್ 30ರಂದು ಉಡುಪಿ ಜಿಲ್ಲೆಯಲ್ಲಿ ಸರಾಸರಿ 73.6 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಮಳೆ ಪ್ರಮಾಣದಲ್ಲಿ ಉಡುಪಿ 85.4 ಮಿ.ಮೀ., ಹೆಬ್ರಿ 85.0 ಮಿ.ಮೀ., ಕಾರ್ಕಳ 83.1 ಮಿ.ಮೀ., ಬೈಂದೂರು 69.9 ಮಿ.ಮೀ., ಕುಂದಾಪುರ 66.4 ಮಿ.ಮೀ., ಬ್ರಹ್ಮಾವರ 62.2 ಮಿ.ಮೀ. ಹಾಗೂ ಕಾಪು 61.8 ಮಿ.ಮೀ. ಮಳೆಯಾಗಿದೆ. ಪ್ರಮುಖ ಜಲಾಶಯಗಳ ನೀರಿನ ಮಟ್ಟವೂ ಸುರಕ್ಷಿತವಾಗಿದ್ದು, ಜಿಲ್ಲೆಯ ಯಾವುದೇ ಭಾಗದಲ್ಲಿ ಪ್ರವಾಹದ ಆತಂಕ ಅಥವಾ ತುರ್ತು ಪರಿಸ್ಥಿತಿ ಉಂಟಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.


