ಉಡುಪಿ: ಸನಾತನ ಸಂಸ್ಥೆಯ ವತಿಯಿಂದ ಉಡುಪಿಯಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗುತ್ತಿರುವ ‘ಶ್ರೀ ಮಹಾಧನ್ವಂತರಿ ಯಾಗ’ದ ಪ್ರಚಾರ ಹಾಗೂ ಪೂರ್ವಸಿದ್ಧತೆಗಳಿಗಾಗಿ ಪೇಜಾವರ ಮಠದ ಹಿಂಭಾಗದಲ್ಲಿ ನೂತನ ಕಾರ್ಯಾಲಯ ಆರಂಭವಾಗಲಿದೆ. ನವೆಂಬರ್ 9ರಂದು ಸಂಜೆ 4 ಗಂಟೆಗೆ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಅಮೃತಹಸ್ತದಿಂದ ಕಾರ್ಯಾಲಯ ಉದ್ಘಾಟನೆಗೊಳ್ಳಲಿದೆ ಎಂದು ಆಯೋಜನಾ ಸಮಿತಿಯ ಸಂಚಾಲಕ ಗುರುಪ್ರಸಾದ್ ಗೌಡ ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾಗದ ಪ್ರಚಾರ ಹಾಗೂ ಸಿದ್ಧತೆಗಳನ್ನು ಮತ್ತಷ್ಟು ವ್ಯವಸ್ಥಿತವಾಗಿ ಕೈಗೊಳ್ಳುವ ಉದ್ದೇಶದಿಂದ ಕಾರ್ಯಾಲಯ ಆರಂಭಿಸಲಾಗುತ್ತಿದೆ ಎಂದರು. ಕಾರ್ಯಕ್ರಮದ ಸಿದ್ಧತೆಗಳ ಕುರಿತು ಮಾತನಾಡಿದ ಸ್ವಾಗತ ಸಮಿತಿಯ ಸಂಘಟನಾ ಕಾರ್ಯದರ್ಶಿ ವಿಜಯ ಕೊಡವೂರು, ಲೋಕಕಲ್ಯಾಣ ಹಾಗೂ ಸಾರ್ವಜನಿಕರ ಆರೋಗ್ಯವೃದ್ಧಿಯ ಸಂಕಲ್ಪದೊಂದಿಗೆ ಮಹಾಯಾಗವನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ವಿವಿಧ ಸಂಘ-ಸಂಸ್ಥೆಗಳಿಗೆ ಭೇಟಿ ನೀಡಿ ಸಾರ್ವಜನಿಕರನ್ನು ಆಹ್ವಾನಿಸುವ ಕಾರ್ಯ ನಡೆಯುತ್ತಿದ್ದು, ಕಾರ್ಯಾಲಯ ಉದ್ಘಾಟನೆಯ ಬಳಿಕ ಈ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳಲಿವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತ ಪೂಜ್ಯ ರಮಾನಂದ ಗೌಡ, ಸ್ವಾಗತ ಸಮಿತಿಯ ಸಂಘಟನಾ ಕಾರ್ಯದರ್ಶಿ ವಿಜಯ ಕೊಡವೂರು, ಆಯೋಜನಾ ಸಮಿತಿಯ ಸಂಚಾಲಕ ಗುರುಪ್ರಸಾದ್ ಗೌಡ ಹಾಗೂ ಸ್ವಾಗತ ಸಮಿತಿಯ ಶ್ರೀನಿವಾಸ ಉಪಸ್ಥಿತರಿದ್ದರು.


