ಬೆಂಗಳೂರು : 2011ನೇ ಸಾಲಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಮೂಲಕ ಆಯ್ಕೆಯಾಗಿದ್ದ 362 ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಘೋಷಿಸಿ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ, ಅಂದು ಆಯ್ಕೆಯಾಗಿ ಪ್ರಸ್ತುತ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ನೆರವಿಗೆ ಬರುವಂತೆ ಮನವಿ ಸಲ್ಲಿಸಿದರು.

ಸುಪ್ರೀಂ ಕೋರ್ಟ್ನ ತೀರ್ಪಿನಿಂದಾಗಿ ಕಳೆದ ಹಲವು ವರ್ಷಗಳಿಂದ ಸರಕಾರಿ ಸೇವೆಯಲ್ಲಿರುವ ಅಧಿಕಾರಿಗಳ ಭವಿಷ್ಯ ಅನಿಶ್ಚಿತತೆಗೆ ಸಿಲುಕಿದೆ. ಸುಮಾರು 15 ವರ್ಷಗಳ ಹಿಂದೆ ನಡೆದ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಕಾನೂನು ಹೋರಾಟ ಇದೀಗ ಅಂತಿಮ ಹಂತ ತಲುಪಿದ್ದು, ತೀರ್ಪಿನ ಪರಿಣಾಮವಾಗಿ ತಮ್ಮ ಉದ್ಯೋಗ ಮತ್ತು ಸೇವಾ ಭದ್ರತೆಯ ಬಗ್ಗೆ ಅಧಿಕಾರಿಗಳಲ್ಲಿ ಆತಂಕ ಮೂಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿಯಾದ ಅಧಿಕಾರಿಗಳು, ತಮ್ಮ ಸೇವೆಯನ್ನು ಮುಂದುವರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಸರಕಾರ ತಮ್ಮ ನೆರವಿಗೆ ನಿಲ್ಲಬೇಕು ಎಂದು ಮನವಿ ಮಾಡಿದರು.

2011ರ ನವೆಂಬರ್ನಲ್ಲಿ ಕೆಪಿಎಸ್ಸಿ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. 2012ರಲ್ಲಿ ಪೂರ್ವಭಾವಿ ಪರೀಕ್ಷೆ ಹಾಗೂ ಅದೇ ವರ್ಷದ ಡಿಸೆಂಬರ್ನಿಂದ 2013ರ ಜನವರಿವರೆಗೆ ಮುಖ್ಯ ಪರೀಕ್ಷೆ ನಡೆದಿತ್ತು. 2013ರ ಮೇ ತಿಂಗಳಲ್ಲಿ ಸಂದರ್ಶನ ಪ್ರಕ್ರಿಯೆ ಪೂರ್ಣಗೊಂಡಿತ್ತು. ಆದರೆ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ, ಸಂದರ್ಶನದ ಅಂಕಗಳ ಹಂಚಿಕೆ ಮತ್ತು ಮೌಲ್ಯಮಾಪನದಲ್ಲಿ ಲೋಪಗಳಾಗಿವೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ವಿವಾದ ಆರಂಭವಾಗಿತ್ತು.

ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 2014ರಲ್ಲಿ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ದಳಕ್ಕೆ (ಸಿಐಡಿ) ವಹಿಸಿತ್ತು. ತನಿಖಾ ವರದಿಯ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಮೊರೆ ಹೋಗಿದ್ದರು. ನ್ಯಾಯಮಂಡಳಿ ಅಭ್ಯರ್ಥಿಗಳ ಪರ ಆದೇಶ ನೀಡಿದ್ದರೂ, 2018ರಲ್ಲಿ ಹೈಕೋರ್ಟ್ ನೇಮಕಾತಿ ರದ್ದತಿ ನಿರ್ಧಾರವನ್ನು ಎತ್ತಿಹಿಡಿದಿತ್ತು.

ನಂತರ 2022ರಲ್ಲಿ ರಾಜ್ಯ ಸರಕಾರ ‘2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆ ಮತ್ತು ನೇಮಕಾತಿ ಮಾನ್ಯತಾ ಕಾಯ್ದೆ’ಯನ್ನು ಜಾರಿಗೆ ತಂದು, ಹಿಂದಿನ ಆಯ್ಕೆ ಪ್ರಕ್ರಿಯೆಯನ್ನು ಮಾನ್ಯಗೊಳಿಸಿತ್ತು. ಇದರ ಆಧಾರದಲ್ಲಿ ಅಭ್ಯರ್ಥಿಗಳ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಕಾಯ್ದೆಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠ ಅ.29ರಂದು ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಿ ರದ್ದುಗೊಳಿಸಿದೆ. ಅಲ್ಲದೆ, ವಿವಾದಿತ ನೇಮಕಾತಿಯಡಿ ನೀಡಲಾಗಿರುವ ನೇಮಕಾತಿಗಳೂ ಅಂತ್ಯಗೊಳ್ಳಲಿವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಗ್ರೂಪ್ ‘ಎ’ ಮತ್ತು ‘ಬಿ’ ವೃಂದದಲ್ಲಿ ಪ್ರಸ್ತುತ ಖಾಲಿ ಇರುವ ಹುದ್ದೆಗಳಿಗೆ ಚಾಲ್ತಿಯಲ್ಲಿರುವ ನೇಮಕಾತಿ ನಿಯಮಗಳ ಪ್ರಕಾರ ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಈ ಹಿಂದೆ ಆಯ್ಕೆಯಾಗಿದ್ದರೂ ಅಕ್ರಮದಲ್ಲಿ ಭಾಗಿಯಾಗದ ಅಭ್ಯರ್ಥಿಗಳು ಸೇರಿದಂತೆ ಅರ್ಹರಿಗೆ ಹೊಸ ನೇಮಕಾತಿಯಲ್ಲಿ ಒಂದು ಬಾರಿಯ ವಯೋಮಿತಿ ಸಡಿಲಿಕೆ ನೀಡುವಂತೆಯೂ ಸೂಚಿಸಿದೆ.

ಹೊಸ ನೇಮಕಾತಿಯಲ್ಲಿ ಆಯ್ಕೆಯಾಗಿ ಮತ್ತೆ ಸೇವೆಗೆ ಸೇರಿದರೆ, ಹಿಂದಿನ ಸೇವಾವಧಿಯನ್ನು ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳ ಲೆಕ್ಕಾಚಾರಕ್ಕೆ ಪರಿಗಣಿಸಬೇಕು. ಆದರೆ ಹಳೆಯ ನೇಮಕಾತಿಯ ಆಧಾರದಲ್ಲಿ ಹಿಂದಿನ ದಿನಾಂಕದಿಂದ ಸೇವಾ ಹಿರಿತನ ಅಥವಾ ಬಾಕಿ ವೇತನದ ಸೌಲಭ್ಯ ನೀಡುವಂತಿಲ್ಲ ಎಂಬುದನ್ನೂ ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿಯಾದ ಅಧಿಕಾರಿಗಳು, ದೀರ್ಘಕಾಲದಿಂದ ಸರಕಾರಿ ಸೇವೆ ಸಲ್ಲಿಸುತ್ತಿರುವ ತಮ್ಮ ವೃತ್ತಿ ಬದುಕು ಮತ್ತು ಕುಟುಂಬಗಳ ಭವಿಷ್ಯದ ಮೇಲೆ ತೀರ್ಪಿನಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಗಮನ ಸೆಳೆದರು. ನ್ಯಾಯಾಲಯದ ಆದೇಶದ ವ್ಯಾಪ್ತಿಯಲ್ಲಿ ತಮ್ಮ ಸೇವಾ ಹಿತಾಸಕ್ತಿಗಳನ್ನು ರಕ್ಷಿಸಲು ಸರಕಾರ ಸೂಕ್ತ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಸುಮಾರು ಒಂದೂವರೆ ದಶಕದಿಂದ ಮುಂದುವರಿದಿರುವ 2011ರ ಕೆಪಿಎಸ್ಸಿ ನೇಮಕಾತಿ ವಿವಾದಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಹೊಸ ತಿರುವು ನೀಡಿದ್ದು, ಇದೀಗ ಸರಕಾರ ಕೈಗೊಳ್ಳಲಿರುವ ಮುಂದಿನ ಕ್ರಮಗಳ ಬಗ್ಗೆ 362 ಅಭ್ಯರ್ಥಿಗಳು ಹಾಗೂ ಪ್ರಸ್ತುತ ಸೇವೆಯಲ್ಲಿರುವ ಅಧಿಕಾರಿಗಳ ಗಮನ ನೆಟ್ಟಿದೆ.


