Friday, October 30, 2026

spot_img

ಅಕ್ರಮ ಕೊಜೆ ಮಣ್ಣಿನ ಸಾಗಾಟದ ವೇಳೆ ಸರಣಿ ಅಪಘಾತ: ಮೂವರು ಆರೋಪಿಗಳ ಬಂಧನ

ಉಡುಪಿ : ಅಕ್ರಮವಾಗಿ ಕೊಜೆ ಮಣ್ಣನ್ನು ಸಾಗಿಸುತ್ತಿದ್ದ ಎರಡು ಟಿಪ್ಪರ್‌ಗಳ ಚಾಲಕರ ಅಜಾಗರೂಕ ಹಾಗೂ ಅಪಾಯಕಾರಿ ಚಾಲನೆಯಿಂದ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಅ. 30ರಂದು ಬೆಳಗ್ಗೆ ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಬಳಿ ರಾಜ್ಯ ಹೆದ್ದಾರಿ 52ರಲ್ಲಿ ನಡೆದಿದೆ. ಗಾಯಗೊಂಡವರನ್ನು ಟಿ.ಕೆ. ಮೊಹಮ್ಮದ್ ಶಯಾನ್ ಮತ್ತು ಮೊಹಮ್ಮದ್ ರಯಾನ್ ಎಂದು ಗುರುತಿಸಲಾಗಿದ್ದು, ಇಬ್ಬರನ್ನೂ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅ. 30ರಂದು ಬೆಳಗ್ಗೆ ಸುಮಾರು 8.45ಕ್ಕೆ ಕುಂದಾಪುರ ಕಡೆಯಿಂದ ಎರಡು ಟಿಪ್ಪರ್‌ಗಳು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿದ್ದವು. ಈ ವೇಳೆ ಎದುರಿನಿಂದ ಕೆಎಸ್‌ಆರ್‌ಟಿಸಿ ಬಸ್ ಬರುತ್ತಿರುವುದನ್ನು ಗಮನಿಸಿದ ಟಿಪ್ಪರ್ ಚಾಲಕ ವಾಹನದ ವೇಗ ಕಡಿಮೆ ಮಾಡಿದ್ದಾನೆ. ಹಿಂಬದಿಯಿಂದ ಬರುತ್ತಿದ್ದ ಟಿಪ್ಪರ್ ಚಾಲಕ ಅತಿವೇಗದಿಂದ ಬಂದು ಮುಂದಿನ ಟಿಪ್ಪರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ನಿಯಂತ್ರಣ ತಪ್ಪಿದ ಟಿಪ್ಪರ್ ರಸ್ತೆಯ ಬಲಭಾಗಕ್ಕೆ ಚಲಿಸಿ, ಕಂಡ್ಲೂರಿನಿಂದ ಬಸ್ರೂರು ಕಡೆಗೆ ಕಾಲೇಜಿಗೆ ತೆರಳುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.ಅಪಘಾತದಿಂದ ಸ್ಕೂಟರ್ ಸವಾರರಾದ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪರವಾನಿಗೆ ಇಲ್ಲದೆ ಕೊಜೆ ಮಣ್ಣಿನ ಸಾಗಾಟ

ಅಪಘಾತಕ್ಕೆ ಕಾರಣವಾದ ಟಿಪ್ಪರ್‌ನಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಕೊಜೆ ಮಣ್ಣನ್ನು ತುಂಬಿಕೊಂಡು ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಪ್ಪರ್ ಚಾಲಕರಾದ ನಾಗರಾಜ ಮತ್ತು ರತ್ವೀಜ್ ಹಾಗೂ ಕೊಜೆ ಮಣ್ಣು ತೆಗೆದ ಸ್ಥಳದ ಮಾಲೀಕ ಅಜಿತ್ ಶೆಟ್ಟಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ಪೇತ್ರಿಯಲ್ಲೂ ಅಕ್ರಮ ಕೊಜೆ ಮಣ್ಣಿನ ದಂಧೆ

ಇತ್ತೀಚೆಗಷ್ಟೇ ಬ್ರಹ್ಮಾವರ ತಾಲೂಕಿನ ಪೇತ್ರಿ ಪ್ರದೇಶದಲ್ಲಿ ಅಕ್ರಮವಾಗಿ ಕೊಜೆ ಮಣ್ಣು ತೆಗೆದು ಸಾಗಾಟ ಮಾಡುತ್ತಿದ್ದ ಬಗ್ಗೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದರು. ಇದೀಗ ಬಳ್ಕೂರಿನಲ್ಲೂ ಅಕ್ರಮ ಮಣ್ಣಿನ ಸಾಗಾಟದ ವೇಳೆ ಅಪಘಾತ ಸಂಭವಿಸಿರುವುದು ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಕೊಜೆ ಮಣ್ಣಿನ ದಂಧೆಯತ್ತ ಗಮನ ಸೆಳೆದಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles