ಕೋಟ : ಹಿಂದೂಗಳಿಗೆ ಭಗವದ್ಗೀತೆ, ಮುಸ್ಲಿಮರಿಗೆ ಕುರಾನ್, ಕ್ರೈಸ್ತರಿಗೆ ಬೈಬಲ್ ಇರುವಂತೆ, ಎಲ್ಲಾ ಧರ್ಮಗಳನ್ನೂ ಒಪ್ಪಿಕೊಳ್ಳುವ ಸಂವಿಧಾನ ಎಂಬ ಮಹಾಗ್ರಂಥವನ್ನು ದೇಶಕ್ಕೆ ನೀಡಿದವರು ಸಂವಿಧಾನ ಶಿಲ್ಪಿ ಎಂದು ನಿವೃತ್ತ ಪ್ರಾಂಶುಪಾಲ ರೋ. ಬಾಲಕೃಷ್ಣ ಶೆಟ್ಟಿ ಹೇಳಿದರು.

ಅವರು ಸಾಲಿಗ್ರಾಮ ರೋಟರಿ ಕ್ಲಬ್ ಕಚೇರಿಯಲ್ಲಿ ನಡೆದ ವಾರದ ಸಭೆಯ ಅಂಗವಾಗಿ ಆಯೋಜಿಸಲಾದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದ ಅವರು, ಸಂವಿಧಾನದಲ್ಲಿ ಮಾನವರಷ್ಟೇ ಅಲ್ಲದೆ ಪ್ರಕೃತಿಯ ಪ್ರತಿಯೊಂದು ಅಂಶಕ್ಕೂ ಸ್ಥಾನ ನೀಡಲಾಗಿದೆ ಎಂದು ಹೇಳಿದರು.

ಭಾರತವು 142 ಕೋಟಿ ಜನಸಂಖ್ಯೆಯನ್ನು ಹೊಂದಿರುವ, ವಿಶ್ವದ ಸುಮಾರು 17.75 ಶೇಕಡಾ ಜನರನ್ನು ಒಳಗೊಂಡ ವೈವಿಧ್ಯಮಯ ದೇಶವಾಗಿದೆ. ಇಂತಹ ವೈವಿಧ್ಯತೆಯ ದೇಶಕ್ಕೆ ಸಂವಿಧಾನ ರಚಿಸುವುದು ಸುಲಭದ ಕೆಲಸವಲ್ಲ. 543 ಸಂಸ್ಥಾನಗಳಿದ್ದ ದೇಶದಲ್ಲಿ ಗಡಿ ಬದಲಾವಣೆಗಳ ನಡುವೆ, ರಾಜ್ಯಗಳ ಗಡಿ ರೇಖೆಗಳನ್ನು ಸ್ಪಷ್ಟವಾಗಿ ಗುರುತಿಸುವಲ್ಲಿ ಸಂವಿಧಾನದ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ರೋ. ಯೋಗೀಶ್ ವಹಿಸಿದ್ದರು. ಕೋಶಾಧಿಕಾರಿ ಚಂದ್ರ ಪೂಜಾರಿ, ಮಾಜಿ ಅಧ್ಯಕ್ಷ ತಿಮ್ಮ ಪೂಜಾರಿ, ದೇವೇಂದ್ರ ಪಟುಗಾರ್, ರಾಜೇಂದ್ರ ಸುವರ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಿವೃತ್ತ ಪ್ರಾಂಶುಪಾಲ ಕೃಷ್ಣ ಕಾಂಚನ್ ಅವರು ಬಾಲಕೃಷ್ಣ ಶೆಟ್ಟಿ ಅವರ ಪರಿಚಯ ಮಾಡಿಕೊಟ್ಟರು. ಕೋಟಸಾಲಿ ಗ್ರಾಮ ರೋಟರಿ ಕ್ಲಬ್ ಕಾರ್ಯದರ್ಶಿ ಶರಣಯ್ಯ ಹಿರೇಮಠ್ ವಂದಿಸಿದರು.


