ಉಡುಪಿ: ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಪಾರಿವಾಳಗಳಿಗೆ ನಿತ್ಯ ಧಾನ್ಯಗಳನ್ನು ಆಹಾರವಾಗಿ ನೀಡುತ್ತಿರುವುದರಿಂದ ಸಾವಿರಾರು ಪಾರಿವಾಳಗಳು ಸೇರುತ್ತಿದ್ದು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಇಲ್ಲಿ ಆಹಾರ ನೀಡುವುದನ್ನು ನಿಷೇಧಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

ರಥಬೀದಿಯು ಪವಿತ್ರ ಧಾರ್ಮಿಕ ಸ್ಥಳವಾಗಿದ್ದು, ಪ್ರತಿನಿತ್ಯ ಭಕ್ತರು, ಯಾತ್ರಾರ್ಥಿಗಳು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದರಿಂದ ಪಕ್ಷಿ ಮಲತ್ಯಾಜ್ಯ ಹೆಚ್ಚಾಗಿ ಸ್ವಚ್ಛತೆ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೆ ಪಾರಿವಾಳಗಳ ಮಲ ಹಾಗೂ ಗರಿಗಳಿಂದ ಮನುಷ್ಯರಲ್ಲಿ ಉಸಿರಾಟ ಮತ್ತು ಶ್ವಾಸಕೋಶ ಸಂಬಂಧಿತ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದ್ದು, ಅಸ್ತಮಾ ಹಾಗೂ ಕ್ಷಯರೋಗಿಗಳಿಗೂ ತೊಂದರೆಯಾಗಬಹುದು ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಥಬೀದಿಯಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ಜಿಲ್ಲಾಡಳಿತ, ನಗರಾಡಳಿತ ಹಾಗೂ ಆರೋಗ್ಯ ಇಲಾಖೆ ನಿಷೇಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪಕ್ಷಿಪ್ರಿಯರ ಭಾವನೆಗಳಿಗೆ ಧಕ್ಕೆಯಾಗದಂತೆ ಪಾರಿವಾಳಗಳಿಗೆ ಆಹಾರ ನೀಡಲು ಸೂಕ್ತವಾದ ಪರ್ಯಾಯ ಸ್ಥಳವನ್ನು ಗುರುತಿಸಿ, ಅಲ್ಲಿ ಆಹಾರ ನೀಡಲು ಅವಕಾಶ ಕಲ್ಪಿಸಬೇಕು. ಪಾರಿವಾಳಗಳ ಮೇಲಿನ ದಯಾಭಾವನೆಯನ್ನೂ ಉಳಿಸಿಕೊಂಡು ಸಾರ್ವಜನಿಕರ ಆರೋಗ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡಬಹುದು ಎಂದಿದ್ದಾರೆ. ರಾಜ್ಯದ ನಗರ ಹಾಗೂ ಮಹಾನಗರಗಳ ಸಾರ್ವಜನಿಕ ಸ್ಥಳಗಳು ಮತ್ತು ಪಾದಚಾರಿ ರಸ್ತೆಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದನ್ನು ನಿಷೇಧಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕರ ಹಿತದೃಷ್ಟಿಯಿಂದ ಸುತ್ತೋಲೆ ಹೊರಡಿಸಿರುವುದಾಗಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ರಥಬೀದಿಯಲ್ಲೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.


