ಉಡುಪಿ: ಹಿರಿಯಡ್ಕ ಪಟ್ಟಣದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 169(ಎ) ಪಕ್ಕದಲ್ಲಿರುವ ಹಲವು ವರ್ಷಗಳಿಂದ ಬಳಕೆಯಾಗದೆ ತುಕ್ಕು ಹಿಡಿದಿರುವ ಬಿಎಸ್ಎನ್ಎಲ್ ಟವರ್ವೊಂದನ್ನು ಕೂಡಲೇ ತೆರವುಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ ಗಣೇಶ್ರಾಜ್ ಸರಳೆಬೆಟ್ಟು ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಹಿರಿಯಡ್ಕದ ಕಾಂಗ್ರೆಸ್ನ ಹಿರಿಯ ಮುಖಂಡ ಎಚ್. ಜಯಂತ್ರಾವ್ ಅವರ ಮನೆಯ ಸಮೀಪದಲ್ಲಿರುವ ಈ ಟವರ್ ಸುಮಾರು ಹತ್ತು ವರ್ಷಗಳಿಂದ ಬಳಕೆಯಾಗದೆ ನಿರುಪಯುಕ್ತ ಸ್ಥಿತಿಯಲ್ಲಿದೆ ಎನ್ನಲಾಗಿದೆ. ಟವರ್ನ ಸುತ್ತ ಗಿಡಗಂಟೆಗಳು ಬೆಳೆದು, ನಿರ್ವಹಣೆಯಿಲ್ಲದೆ ಶಿಥಿಲಾವಸ್ಥೆಗೆ ತಲುಪಿದೆ. ಟವರ್ ಇರುವ ಕಾರಣ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಗತ್ಯವಿರುವ ಚರಂಡಿ ನಿರ್ಮಾಣ ಕಾಮಗಾರಿಗೂ ಅಡಚಣೆಯಾಗುತ್ತಿದೆ. ಹಿರಿಯಡ್ಕ ಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಹರಿದುಬರುವ ಮಳೆನೀರು ಮತ್ತು ಕೊಳಚೆ ನೀರು ಸರಾಗವಾಗಿ ಸಾಗದೆ ಟವರ್ನ ಕೆಳಭಾಗದಲ್ಲಿ ನೀರು ನಿಲ್ಲುತ್ತಿದೆ. ಇದರಿಂದ ಸೊಳ್ಳೆಗಳ ಉತ್ಪತ್ತಿಗೆ ಪೂರಕ ವಾತಾವರಣ ನಿರ್ಮಾಣವಾಗುತ್ತಿದೆ.

ಟವರ್ನ ಕೆಳಭಾಗದಲ್ಲಿ ಕೊಳಚೆ ನೀರು ನಿಂತುಕೊಳ್ಳುತ್ತಿರುವುದರಿಂದ ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯದ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ಈ ಪರಿಸರದಲ್ಲಿ ವಾಸಿಸುವ ಕೆಲವು ಮಕ್ಕಳಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿರುವ ವರದಿಗಳೂ ಇವೆ ಎಂದು ಗಣೇಶ್ರಾಜ್ ಸರಳೆಬೆಟ್ಟು ತಿಳಿಸಿದ್ದಾರೆ. ಇನ್ನು, ಟವರ್ ತುಕ್ಕು ಹಿಡಿದು ದುರ್ಬಲವಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಮೇಲೆ ಅಥವಾ ಸಾರ್ವಜನಿಕರ ಮೇಲೆ ಕುಸಿಯುವ ಮುನ್ನವೇ ಮುನ್ನೆಚ್ಚರಿಕೆ ಕ್ರಮವಾಗಿ ಅದನ್ನು ತೆರವುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನಿರುಪಯುಕ್ತ ಟವರ್ ತೆರವುಗೊಳಿಸಿ, ಹೆದ್ದಾರಿ ಬದಿಯ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸುವ ಮೂಲಕ ಮಳೆನೀರು ಹಾಗೂ ಕೊಳಚೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಗಣೇಶ್ರಾಜ್ ಸರಳೆಬೆಟ್ಟು ಮನವಿ ಮಾಡಿದ್ದಾರೆ.


