ಉಡುಪಿ: ಶೀರೂರು ಮಠಾಧೀಶರಾದ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವದ ಅಂಗವಾಗಿ ಶುಕ್ರವಾರ ಪುರಪ್ರವೇಶ ಭಕ್ತಿಭಾವ ಮತ್ತು ವೈಭವದೊಂದಿಗೆ ನೆರವೇರಿತು. ಸಂಪ್ರದಾಯದಂತೆ ವಿವಿಧ ತೀರ್ಥಕ್ಷೇತ್ರಗಳ ದರ್ಶನ ಪೂರ್ಣಗೊಳಿಸಿ ಉಡುಪಿಯ ಕಡಿಯಾಳಿಗೆ ಆಗಮಿಸಿದ ಶ್ರೀಪಾದರನ್ನು ಭಕ್ತರು ಹಾಗೂ ಶಿಷ್ಯವೃಂದ ಆದ್ದೂರಿಯಾಗಿ ಸ್ವಾಗತಿಸಿದರು.

ಅಲ್ಲಿಂದ ಶ್ರೀಗಳನ್ನು ಭವ್ಯ ಮೆರವಣಿಗೆಯಲ್ಲಿ ಶೀರೂರು ಮಠಕ್ಕೆ ಕರೆದೊಯ್ಯಲಾಯಿತು. ಮೆರವಣಿಗೆಯಲ್ಲಿ ಶೀರೂರು ಮಠದ ಪಟ್ಟದೇವರಾದ ರುಕ್ಮಿಣಿ ಹಾಗೂ ಸತ್ಯಭಾಮ ಸಮೇತ ವಿಠಲ ದೇವರನ್ನು ಮೇಣೆಯಲ್ಲಿಟ್ಟು ಸಂಪ್ರದಾಯಬದ್ಧವಾಗಿ ಕೊಂಡೊಯ್ಯಲಾಯಿತು. ವೇದವರ್ಧನತೀರ್ಥ ಶ್ರೀಪಾದರು ಮಯೂರಾಲಂಕೃತ ತೆರೆದ ವಾಹನದಲ್ಲಿ ಭಕ್ತರಿಗೆ ಆಶೀರ್ವಾದ ನೀಡುತ್ತ ಸಾಗಿದರು. ಪುರಪ್ರವೇಶ ಮೆರವಣಿಗೆ ಕಡಿಯಾಳಿಯಿಂದ ಹೊರಟು ಸಿಟಿಬಸ್ ಸ್ಟಾಂಡ್ ಮೂಲಕ ಕೃಷ್ಣ ಮಠ ತಲುಪಿತು

ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಪರ್ಯಾಯ ಸಂಭ್ರಮಕ್ಕೆ ಸಾಕ್ಷಿಯಾದರು. ವಿವಿಧ ಸಾಂಸ್ಕೃತಿಕ ಕಲಾತಂಡಗಳು, ಕುಣಿತ ಭಜನೆ ಹಾಗೂ ಡೋಲು ಕುಣಿತ ತಂಡಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ಪುರಪ್ರವೇಶದ ಮೂಲಕ ಪರ್ಯಾಯ ಮಹೋತ್ಸವದ ಸಂಭ್ರಮ ನಗರದಲ್ಲಿ ಮನೆಮಾಡಿದ್ದು, ಉಡುಪಿ ಧಾರ್ಮಿಕ ಉತ್ಸಾಹದಿಂದ ಕಂಗೊಳಿಸಿತು.



