Tuesday, September 22, 2026

spot_img

ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಹತ್ಯೆ: ಒಂಬತ್ತು ತುಂಡುಗಳಾಗಿ ಶವ ಪತ್ತೆ; ಪತ್ನಿ, ಪುತ್ರ ನಾಪತ್ತೆ

ಉಡುಪಿ: ಉದ್ಯೋಗ ಅರಸಿ ಎರಡು ದಶಕಗಳ ಹಿಂದೆ ಅರಬ್ ರಾಷ್ಟ್ರಕ್ಕೆ ತೆರಳಿ ಶಾರ್ಜಾದಲ್ಲಿ ನೆಲೆಸಿದ್ದ ಕುಂದಾಪುರ ಮೂಲದ ವ್ಯಕ್ತಿಯೊಬ್ಬರು ಬರ್ಬರವಾಗಿ ಹತ್ಯೆಗೀಡಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕಾಶ್ ಕುಂದರ್ ಎಂಬವರ ಶವ ಅವರದ್ದೇ ಎನ್ನಲಾದ ಕಾರಿನ ಡಿಕ್ಕಿಯಲ್ಲಿ ಎರಡು ಚೀಲಗಳೊಳಗೆ ಒಂಬತ್ತು ತುಂಡುಗಳಾಗಿ ಪತ್ತೆಯಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಪ್ರಕಾಶ್ ಅವರು ಶಾರ್ಜಾದಲ್ಲಿ ಪತ್ನಿ ಹಾಗೂ ಪುತ್ರನೊಂದಿಗೆ ವಾಸವಾಗಿದ್ದು, ಉದ್ಯೋಗ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಕೆಲವು ತಿಂಗಳ ಹಿಂದೆ ಅವರೊಂದಿಗೆ ಕುಟುಂಬಸ್ಥರ ಸಂಪರ್ಕ ಕಡಿತಗೊಂಡಿತ್ತು. ಸಹೋದರ ಪ್ರಶಾಂತ್ ಕುಂದರ್ ಅವರು ವಾಯ್ಸ್ ಮೆಸೇಜ್ ಕಳುಹಿಸಿದಾಗ, ಪ್ರಕಾಶ್ ಅವರಿಂದ ವಾಯ್ಸ್ ಪ್ರತಿಕ್ರಿಯೆಯ ಬದಲು ಟೆಕ್ಸ್ಟ್ ಮೆಸೇಜ್ ಬಂದಿರುವುದು ಕುಟುಂಬಕ್ಕೆ ಅನುಮಾನ ಮೂಡಿಸಿತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಪ್ರಕಾಶ್ ಕೆಲಸ ಮಾಡುತ್ತಿದ್ದ ಏರ್‌ಪೋರ್ಟ್ ಏಜೆನ್ಸಿಯನ್ನು ಕುಟುಂಬಸ್ಥರು ಸಂಪರ್ಕಿಸಿದಾಗ, ಅವರು ಭಾರತಕ್ಕೆ ಮರಳಿದ್ದಾರೆ ಎಂಬ ಮಾಹಿತಿ ದೊರೆತಿತ್ತು ಎನ್ನಲಾಗಿದೆ. ಆದರೆ ಪ್ರಕಾಶ್ ಭಾರತಕ್ಕೆ ಬಂದಿರುವ ಬಗ್ಗೆ ಕುಟುಂಬಕ್ಕೆ ಯಾವುದೇ ಮಾಹಿತಿ ಇರಲಿಲ್ಲ. ಬಳಿಕ ಅವರು ಭಾರತಕ್ಕೆ ಮರಳಿಲ್ಲ ಎಂಬುದು ಖಚಿತವಾದ ಹಿನ್ನೆಲೆಯಲ್ಲಿ ಶಾರ್ಜಾದಲ್ಲಿದ್ದ ಸಂಬಂಧಿಕರ ಮೂಲಕ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಲಾಗಿತ್ತು ಎನ್ನಲಾಗಿದೆ.

ದೂರು ಆಧರಿಸಿ ತನಿಖೆ ನಡೆಸಿದ ಶಾರ್ಜಾ ಪೊಲೀಸರಿಗೆ ಪ್ರಕಾಶ್ ಅವರದ್ದೇ ಎನ್ನಲಾದ ಕಾರಿನ ಡಿಕ್ಕಿಯಲ್ಲಿ ಎರಡು ಚೀಲಗಳೊಳಗೆ ಒಂಬತ್ತು ತುಂಡುಗಳಾಗಿ ವಿಂಗಡಿಸಲಾಗಿದ್ದ ಶವ ಪತ್ತೆಯಾಗಿದೆ ಎನ್ನಲಾಗಿದೆ. ಶವದ ಗುರುತು ಪತ್ತೆಯಾಗದಂತೆ ಮಾಡಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಬಳಿಕ ಸಂಬಂಧಿಕರ ಡಿಎನ್‌ಎ ಮಾದರಿಗಳನ್ನು ಪಡೆದು ನಡೆಸಿದ ಪರೀಕ್ಷೆಯಲ್ಲಿ ಪತ್ತೆಯಾದ ಶವ ಪ್ರಕಾಶ್ ಕುಂದರ್ ಅವರದ್ದೇ ಎಂಬುದು ದೃಢಪಟ್ಟಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಜುಲೈ ತಿಂಗಳ ಕೊನೆಯ ಭಾಗದಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ವಿಚಾರಣೆ ಹಾಗೂ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಆದರೆ ಹತ್ಯೆಯ ಹಿಂದಿನ ಕಾರಣವೇನು, ಪ್ರಕಾಶ್ ಅವರನ್ನು ಯಾರು ಹತ್ಯೆ ಮಾಡಿದರು ಮತ್ತು ಶವವನ್ನು ತುಂಡುಗಳಾಗಿ ಮಾಡಿ ಕಾರಿನಲ್ಲಿಟ್ಟಿರುವುದರ ಹಿಂದಿನ ಉದ್ದೇಶವೇನು ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗಬೇಕಿದೆ.

ಪತ್ನಿ, ಪುತ್ರ ನಾಪತ್ತೆ

ಪ್ರಕರಣಕ್ಕೆ ಮತ್ತೊಂದು ನಿಗೂಢ ತಿರುವು ಸಿಕ್ಕಿದ್ದು, ಪ್ರಕಾಶ್ ಅವರ ಪತ್ನಿ ಟೀನಾ ಕುಂದರ್ ಹಾಗೂ ಪುತ್ರ ಘಟನೆ ಬಳಿಕ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಇಬ್ಬರೂ ಸದ್ಯ ಎಲ್ಲಿದ್ದಾರೆ ಎಂಬ ಮಾಹಿತಿ ಕುಟುಂಬಸ್ಥರಿಗೆ ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.  ಪತ್ನಿ ಅಥವಾ ಪುತ್ರ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬುದು ಸದ್ಯಕ್ಕೆ ದೃಢಪಟ್ಟಿಲ್ಲ. ಅವರ ನಾಪತ್ತೆಗೂ ಹತ್ಯೆ ಪ್ರಕರಣಕ್ಕೂ ಯಾವುದೇ ಸಂಬಂಧವಿದೆಯೇ ಎಂಬುದನ್ನು ತನಿಖೆಯಿಂದ ಸ್ಪಷ್ಟಪಡಿಸಬೇಕಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪ್ರಕರಣದ ತನಿಖೆ ಶಾರ್ಜಾದಲ್ಲೇ ಮುಂದುವರಿದಿದ್ದು, ಪ್ರಕಾಶ್ ಅವರ ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬಸ್ಥರು ಪ್ರಯತ್ನ ನಡೆಸುತ್ತಿದ್ದಾರೆ. ಶವ ಭಾರತಕ್ಕೆ ಬಂದ ಬಳಿಕ ಕೇಂದ್ರ ಸರ್ಕಾರದ ಮೂಲಕವೂ ಪ್ರಕರಣದ ತನಿಖೆಗೆ ಒತ್ತಾಯಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಉದ್ಯೋಗ ಅರಸಿ ವಿದೇಶಕ್ಕೆ ತೆರಳಿ ಹಲವು ವರ್ಷಗಳಿಂದ ಅಲ್ಲೇ ನೆಲೆಸಿದ್ದ ವ್ಯಕ್ತಿಯೊಬ್ಬರ ಜೀವನ ಇಂತಹ ದುರಂತ ಅಂತ್ಯ ಕಂಡಿರುವುದು ಕುಟುಂಬಸ್ಥರನ್ನು ಆಘಾತಕ್ಕೀಡು ಮಾಡಿದೆ. ಪ್ರಕಾಶ್ ಅವರ ಹತ್ಯೆಯ ಹಿಂದಿನ ನಿಜವಾದ ಕಾರಣ ಹಾಗೂ ಪತ್ನಿ-ಪುತ್ರರ ನಾಪತ್ತೆಯ ಕುರಿತ ಪ್ರಶ್ನೆಗಳಿಗೆ ಶಾರ್ಜಾ ಪೊಲೀಸರ ತನಿಖೆಯಿಂದ ಉತ್ತರ ದೊರೆಯಬೇಕಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles