ಉಡುಪಿ : ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯಡಿ ಈ ಸಾಲಿನಲ್ಲಿ ಆಯ್ಕೆಯಾದ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗಾಗಿ ಒಂದು ದಿನದ ಸಮಾಲೋಚನಾ ಸಭೆ ನಡೆಯಿತು. ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಮಣಿಪಾಲದ ಡಾ. ಟಿ.ಎಂ.ಎ. ಪೈ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಟಿ. ಅಶೋಕ್ ಪೈ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಮಾತನಾಡಿದ ಅವರು, ಐವತ್ತು ವರ್ಷಗಳ ಹಿಂದೆ ಹೆಣ್ಣುಮಕ್ಕಳು ಶಿಕ್ಷಣ ಪಡೆಯಲು ಹಿಂಜರಿಯುತ್ತಿದ್ದ ಸಂದರ್ಭದಲ್ಲಿ ಡಾ. ಟಿ.ಎಂ.ಎ. ಪೈ ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದ್ದರು. ಇಂದು ಈ ಸಭಾಂಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಭಾಗವಹಿಸಿರುವುದು ಸಂತೋಷ ತಂದಿದೆ ಎಂದರು. ಯಕ್ಷಗಾನ ಕಲಾರಂಗವು ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಮನೆಗೆ ತೆರಳಿ ಗುರುತಿಸಿ ಆಯ್ಕೆ ಮಾಡುವುದಲ್ಲದೆ, ಮನೆ ನಿರ್ಮಾಣ ಸೇರಿದಂತೆ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ವಿವಿಧ ರೀತಿಯಲ್ಲಿ ಸ್ಪಂದಿಸುತ್ತಿರುವುದು ಶ್ಲಾಘನೀಯ. ಸಂಸ್ಥೆಯ ಸಮಾಜಮುಖಿ ಕಾರ್ಯಗಳಿಗೆ ತಮ್ಮ ಟ್ರಸ್ಟ್ ಸದಾ ಬೆಂಬಲ ನೀಡಲಿದೆ ಎಂದು ಅವರು ಭರವಸೆ ನೀಡಿದರು. ಕೃಷ್ಣಪ್ರಸಾದ್ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲೀಕ ಸಂಪತ್ ಕುಮಾರ್ ಶೆಟ್ಟಿ ಮಾತನಾಡಿ, ತಾವು ಕಂಡ ಕನಸನ್ನು ನನಸಾಗಿಸಲು ನಡೆಸಿದ ನಿರಂತರ ಪರಿಶ್ರಮ ಹಾಗೂ ಅದರಿಂದ ಹಲವರಿಗೆ ಉದ್ಯೋಗಾವಕಾಶ ಕಲ್ಪಿಸಿದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಕೇವಲ ಕನಸು ಕಾಣುವುದರಿಂದ ಗುರಿ ಸಾಧಿಸಲು ಸಾಧ್ಯವಿಲ್ಲ. ಅದಕ್ಕಾಗಿ ನಿರಂತರ ಪರಿಶ್ರಮ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಯಕ್ಷಗಾನ ಕಲಾರಂಗದ ಕಾರ್ಯಗಳಿಗೆ ತಾವು ಕೈಜೋಡಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಜ್ವಲ ಡೆವಲಪರ್ಸ್ನ ಪುರುಷೋತ್ತಮ ಪಿ. ಶೆಟ್ಟಿ, ಯು.ಎಸ್. ನಾಯಕ್ ಚಾರಿಟೇಬಲ್ ಟ್ರಸ್ಟ್ನ ಸಿಎ ಸುರೇಶ್ ನಾಯಕ್, ಮಲ್ನಾಡ್ ಕ್ಯಾಶ್ಯೂವಿನ್ನ ಎಚ್. ನಾಗರಾಜ ಶೆಟ್ಟಿ ಅಭ್ಯಾಗತರಾಗಿ ಭಾಗವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷರಾದ ಪಿ. ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ ಹಾಗೂ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಸುದರ್ಶನ ಮೂರ್ತಿ ಹಾಗೂ ಡಾ. ಲಕ್ಷ್ಮೀ ಎಸ್. ಮೂರ್ತಿ ಮಾರ್ಗದರ್ಶಿ ಮಾತುಗಳನ್ನಾಡಿದರು. ಹುಬ್ಬಳ್ಳಿಯ ಮೈ ಲೈಫ್ ಸಂಸ್ಥೆಯ ಸ್ಥಾಪಕ ಪ್ರವೀಣ್ ಗುಡಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳನ್ನಾಡಿ, ಸಣ್ಣಪುಟ್ಟ ಕೆಲಸಗಳನ್ನೂ ಶಿಸ್ತುಬದ್ಧವಾಗಿ ಮಾಡುತ್ತಾ ನಿರಂತರವಾಗಿ ಕ್ರಿಯಾಶೀಲರಾಗಿದ್ದರೆ ದೊಡ್ಡ ಸಾಧನೆ ಮಾಡುವುದು ಕಷ್ಟವಲ್ಲ ಎಂದು ಹೇಳಿದರು. ಈ ಸಾಲಿನಲ್ಲಿ ವಿದ್ಯಾಪೋಷಕ್ ಯೋಜನೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಂದ ಒಟ್ಟು 652 ಅರ್ಜಿಗಳು ಬಂದಿದ್ದವು. ಅವುಗಳಲ್ಲಿ 291 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಸಮಾವೇಶದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾರಂಗದ ವಿವಿಧ ಚಟುವಟಿಕೆಗಳ ಪರಿಚಯ ನೀಡುವ ದೃಶ್ಯಾವಳಿಗಳನ್ನು ಎಲ್ಇಡಿ ಪರದೆಯ ಮೂಲಕ ಪ್ರದರ್ಶಿಸಲಾಯಿತು. ಇದೇ ಸಂದರ್ಭದಲ್ಲಿ ಅಗಲಿದ ವಿದ್ಯಾಪೋಷಕ್ ವಿದ್ಯಾರ್ಥಿನಿ ಪ್ರಮಿತಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂಸ್ಥೆಯ ಸದಸ್ಯರಾದ ಯು. ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ವಿಜಯಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ನಿರಂಜನ ಭಟ್, ಮರ್ಣೆ ಉಮೇಶ ಭಟ್, ಗಣೇಶ್ ರಾವ್ ಎಲ್ಲೂರು, ಅಶೋಕ್ ಎಂ., ನಟರಾಜ ಉಪಾಧ್ಯಾಯ, ಸಂತೋಷ ಕುಮಾರ್ ಶೆಟ್ಟಿ, ಪ್ರಭಾಕರ ಭಂಡಿ, ಡಾ. ಪ್ರತಿಮಾ ಜೆ. ಆಚಾರ್ಯ, ಡಾ. ರಾಘವೇಂದ್ರ ರಾವ್, ಆರ್. ವಸಂತ, ರಂಜಿನಿ ವಸಂತ, ತಾರಾದೇವಿ ಹಾಗೂ ನಾಗರಾಜ ಹೆಗಡೆ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿ, ವಿದ್ಯಾಪೋಷಕ್ ಯೋಜನೆಯ ಕಾರ್ಯವೈಖರಿ ಹಾಗೂ ವಿದ್ಯಾರ್ಥಿಗಳಿಗೆ ದೊರೆಯುವ ನೆರವಿನ ಕುರಿತು ಮಾಹಿತಿ ನೀಡಿದರು.


