ಉಡುಪಿ : ಅತ್ಯಂತ ಅಪರೂಪದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಕೇವಲ ಮೂರು ತಿಂಗಳ ಹಸುಗೂಸಿನ ಯಕೃತ್ತಿನಲ್ಲಿದ್ದ ದೊಡ್ಡ ಗಾತ್ರದ ಗೆಡ್ಡೆಯನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಿದ್ದು, ಮೂರು ವರ್ಷಗಳ ಬಳಿಕವೂ ಮಗು ಸಂಪೂರ್ಣ ಆರೋಗ್ಯವಾಗಿದ್ದು ಕ್ಯಾನ್ಸರ್ ಮುಕ್ತವಾಗಿದೆ. ಮಗುವಿಗೆ ಯಕೃತ್ತು ದೊಡ್ಡದಾಗಿರುವುದು ಹಾಗೂ ಯಕೃತ್ತಿನ ಕ್ಯಾನ್ಸರ್ನ ಪ್ರಮುಖ ಸೂಚಕವಾದ ಆಲ್ಫಾ-ಫೆಟೊಪ್ರೊಟೀನ್ ಮಟ್ಟ ತೀವ್ರವಾಗಿ ಹೆಚ್ಚಿರುವುದು ಪತ್ತೆಯಾಗಿತ್ತು. ತಪಾಸಣೆ ಬಳಿಕ ಹೆಪಟೊಬ್ಲಾಸ್ಟೋಮಾ ಎಂಬ ಅಪರೂಪದ ಮಕ್ಕಳ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ಪ್ರತಿ 10 ಲಕ್ಷ ಮಕ್ಕಳಲ್ಲಿ ಕೇವಲ ಒಂದೆರಡು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಕ್ಯಾನ್ಸರ್, ಮಗುವಿನ ವಂಶವಾಹಿ ಸಮಸ್ಯೆಯಿಂದಾಗಿ ಮತ್ತಷ್ಟು ಅಪರೂಪದ ಸ್ವರೂಪ ಪಡೆದಿತ್ತು.

ವಿಸ್ತೃತ ಪರೀಕ್ಷೆಗಳಲ್ಲಿ ಮಗುವಿಗೆ ಸಿಂಪ್ಸನ್-ಗೋಲಾಬಿ-ಬೆಹ್ಮೆಲ್ ಸಿಂಡ್ರೋಮ್ ಎಂಬ ಅಪರೂಪದ ವಂಶಪಾರಂಪರ್ಯ ಅತಿವೃದ್ಧಿ ಸಮಸ್ಯೆ ಇರುವುದು ಪತ್ತೆಯಾಯಿತು. ಈ ಸಿಂಡ್ರೋಮ್ನೊಂದಿಗೆ ಹೆಪಟೊಬ್ಲಾಸ್ಟೋಮಾ ಕಾಣಿಸಿಕೊಂಡಿರುವ ಜಗತ್ತಿನ 15ಕ್ಕಿಂತ ಕಡಿಮೆ ಪ್ರಕರಣಗಳು ಮಾತ್ರ ವರದಿಯಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಯಕೃತ್ತಿನ ಮಧ್ಯಭಾಗದಲ್ಲಿದ್ದ ಗೆಡ್ಡೆ ಪ್ರಮುಖ ರಕ್ತನಾಳಗಳಿಗೆ ಅತ್ಯಂತ ಸಮೀಪದಲ್ಲಿದ್ದ ಕಾರಣ ತಕ್ಷಣ ಶಸ್ತ್ರಚಿಕಿತ್ಸೆ ನಡೆಸುವುದು ಸಾಧ್ಯವಾಗಿರಲಿಲ್ಲ. ಡಾ. ವಾಸುದೇವ ಭಟ್ ನೇತೃತ್ವದ ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ತಂಡ ಮೊದಲು ನಿಯೋಅಡ್ಜುವಂಟ್ ಕೀಮೋಥೆರಪಿ ನೀಡಿ ಗೆಡ್ಡೆಯನ್ನು ನಿಯಂತ್ರಣಕ್ಕೆ ತಂದ ಬಳಿಕ ಶಸ್ತ್ರಚಿಕಿತ್ಸೆಗೆ ಸಿದ್ಧಪಡಿಸಿತು.

ನಂತರ ಶಸ್ತ್ರಚಿಕಿತ್ಸಾ ಆಂಕೊಲಾಜಿ ತಂಡವು ಸೆಂಟ್ರಲ್ ಹೆಪ್ಟೆಕ್ಟಮಿ ನಡೆಸಿತು. ಯಕೃತ್ತಿನ ಹಾನಿಗೊಳಗಾದ ಕೇಂದ್ರ ಭಾಗದ ನಾಲ್ಕು, ಐದು ಮತ್ತು ಎಂಟನೇ ವಿಭಾಗಗಳನ್ನು ಮಾತ್ರ ತೆಗೆದುಹಾಕಿ, ಆರೋಗ್ಯಕರ ಬಲ ಹಾಗೂ ಎಡ ಭಾಗಗಳನ್ನು ಉಳಿಸಲಾಯಿತು. ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಪ್ರಮುಖ ರಕ್ತನಾಳಗಳಿಗೆ ಹಾನಿಯಾಗದಂತೆ ಹಾಗೂ ಕ್ಯಾನ್ಸರ್ನ ಮಿತಿಯನ್ನು ನಿಖರವಾಗಿ ಗುರುತಿಸಲು ಇಂಟ್ರಾ-ಆಪರೇಟಿವ್ ಅಲ್ಟ್ರಾಸೌಂಡ್ ಮಾರ್ಗದರ್ಶನ ಬಳಸಲಾಯಿತು.ಶಸ್ತ್ರಚಿಕಿತ್ಸೆಯ ಬಳಿಕ ಯಾವುದೇ ಪ್ರಮುಖ ತೊಡಕುಗಳಿಲ್ಲದೆ ಮಗು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಯಿತು. ಚಿಕಿತ್ಸೆಯ ನಂತರ ಮೂರು ವರ್ಷಗಳಿಗೂ ಹೆಚ್ಚಿನ ಅವಧಿಯ ನಿರಂತರ ತಪಾಸಣೆಯಲ್ಲಿ ಸ್ಕ್ಯಾನ್ ಹಾಗೂ ರಕ್ತ ಪರೀಕ್ಷೆಗಳಲ್ಲಿ ಯಾವುದೇ ಕ್ಯಾನ್ಸರ್ ಲಕ್ಷಣ ಕಂಡುಬಂದಿಲ್ಲ. ಮಗು ತನ್ನ ವಯಸ್ಸಿಗೆ ಅನುಗುಣವಾಗಿ ಆರೋಗ್ಯಕರವಾಗಿ ಬೆಳವಣಿಗೆಯಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸಾ ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ನವೀನಾ ಕುಮಾರ್ ಎ.ಎನ್. ಮಾತನಾಡಿ, ಕೇವಲ ಮೂರು ತಿಂಗಳ ಮಗುವಿನ ಯಕೃತ್ತಿನ ಮಧ್ಯಭಾಗದಲ್ಲಿದ್ದ ಗೆಡ್ಡೆಯನ್ನು ತೆಗೆದುಹಾಕುವುದು ಅತ್ಯಂತ ಸವಾಲಿನ ಶಸ್ತ್ರಚಿಕಿತ್ಸೆಯಾಗಿತ್ತು. ಮಗು ಸಹಜವಾಗಿ ಬೆಳೆಯಲು ಸಾಕಷ್ಟು ಆರೋಗ್ಯಕರ ಯಕೃತ್ತನ್ನು ಉಳಿಸುವುದರ ಜೊತೆಗೆ ಪ್ರಮುಖ ರಕ್ತನಾಳಗಳನ್ನು ರಕ್ಷಿಸುವಲ್ಲಿ ಇಂಟ್ರಾ-ಆಪರೇಟಿವ್ ಅಲ್ಟ್ರಾಸೌಂಡ್ ಪ್ರಮುಖ ಪಾತ್ರ ವಹಿಸಿತು ಎಂದರು. ಈ ಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ, ಮಕ್ಕಳ ರಕ್ತಶಾಸ್ತ್ರ ಮತ್ತು ಕ್ಯಾನ್ಸರ್ ವಿಭಾಗ, ಮಕ್ಕಳ ಶಸ್ತ್ರಚಿಕಿತ್ಸೆ, ನವಜಾತ ಶಿಶುಶಾಸ್ತ್ರ, ವೈದ್ಯಕೀಯ ತಳಿಶಾಸ್ತ್ರ ಹಾಗೂ ಅರಿವಳಿಕೆ ವಿಭಾಗಗಳ ತಜ್ಞರು ಸಮನ್ವಯದಿಂದ ಕಾರ್ಯನಿರ್ವಹಿಸಿದ್ದರು. ಅಪರೂಪದ ಈ ಪ್ರಕರಣವನ್ನು ಅಂತರರಾಷ್ಟ್ರೀಯ ವೈದ್ಯಕೀಯ ಜರ್ನಲ್ ಬಿಎಂಜೆ ಕೇಸ್ ರಿಪೋರ್ಟ್ಸ್ ನ 2025ರ ಸಂಚಿಕೆಯಲ್ಲಿ ದಾಖಲಿಸಲಾಗಿದೆ.

ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಮಾತನಾಡಿ, ವಿವಿಧ ವಿಭಾಗಗಳ ತಜ್ಞರ ಸಮನ್ವಯದ ಪ್ರಯತ್ನ ಈ ಯಶಸ್ಸಿಗೆ ಕಾರಣವಾಗಿದೆ. ಕರಾವಳಿ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳ ಮಕ್ಕಳಿಗೆ ವಿಶ್ವದರ್ಜೆಯ ಕ್ಯಾನ್ಸರ್ ಚಿಕಿತ್ಸೆಯನ್ನು ಅವರ ಮನೆಯ ಸಮೀಪದಲ್ಲೇ ಒದಗಿಸುವ ಬದ್ಧತೆಯನ್ನು ಈ ಸಾಧನೆ ಮತ್ತಷ್ಟು ಬಲಪಡಿಸಿದೆ ಎಂದರು. ಮಕ್ಕಳಲ್ಲಿ ಅಸಾಮಾನ್ಯ ಲಕ್ಷಣಗಳು ಕಂಡುಬಂದಾಗ ಆರಂಭದಲ್ಲೇ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸುವುದು ಅತ್ಯಂತ ಮುಖ್ಯ. ಆರಂಭಿಕ ರೋಗನಿರ್ಣಯ, ಸಮನ್ವಯಿತ ಚಿಕಿತ್ಸೆ ಹಾಗೂ ದೀರ್ಘಕಾಲದ ನಿಯಮಿತ ವೈದ್ಯಕೀಯ ಮೇಲ್ವಿಚಾರಣೆ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.


