ಉಡುಪಿ: ದೀಪಾವಳಿ ಎಂದರೆ ಕೇವಲ ಮನೆಯಂಗಳದಲ್ಲಿ ದೀಪ ಬೆಳಗಿಸುವ ಹಬ್ಬವಲ್ಲ, ಮತ್ತೊಬ್ಬರ ಬದುಕಿನಲ್ಲೂ ಸಂತೋಷದ ಬೆಳಕು ಮೂಡಿಸುವ ಹಬ್ಬ ಎಂಬ ಮಾನವೀಯ ಆಶಯದೊಂದಿಗೆ ಬ್ರಹ್ಮಾವರ ಬಿಲ್ಲವ ಸಂಘದ ಬಿಲ್ಲವ ಯುವ ವೇದಿಕೆಯ ವತಿಯಿಂದ ವಿಶೇಷ ದೀಪಾವಳಿ ಸೇವಾ ಕಾರ್ಯಕ್ರಮ ನಡೆಯಿತು.

ಬ್ರಹ್ಮಾವರದ ನಾರಾಯಣ ಗುರು ಸಭಾಭವನದಲ್ಲಿ ಶನಿವಾರ ‘ಅರಿವಿನ ಗುರು – ಗುರುವಿನ ಬೆಳಕು’ ಎಂಬ ಶೀರ್ಷಿಕೆಯಡಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದ ವಿಧವೆಯರ ಕುಟುಂಬಗಳೊಂದಿಗೆ ದೀಪಾವಳಿಯ ಸಂಭ್ರಮ ಹಂಚಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಆಯ್ದ ಅಶಕ್ತ ಕುಟುಂಬಗಳಿಗೆ ದಿನಬಳಕೆಯ ಅಗತ್ಯ ವಸ್ತುಗಳು, ಹೊಸ ಬಟ್ಟೆಗಳು, ಪಟಾಕಿ ಹಾಗೂ ದೀಪಾವಳಿ ಉಡುಗೊರೆಗಳನ್ನು ವಿತರಿಸಲಾಯಿತು. ವಿಶೇಷವಾಗಿ ಪ್ರತಿ ಕುಟುಂಬಕ್ಕೂ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ನೀಡಿ, ಮನೆಗಳಲ್ಲಿ ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅವರ ಸಂದೇಶವನ್ನು ಮನೆಮನೆಗೆ ತಲುಪಿಸುವ ಪ್ರಯತ್ನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, “ನಮ್ಮ ಮನೆಯ ಅಂಗಳದಲ್ಲಿ ದೀಪ ಬೆಳಗಿಸುವುದರ ಜತೆಗೆ ಮತ್ತೊಬ್ಬರ ಬದುಕಿನಲ್ಲೂ ಸಂತೋಷದ ಬೆಳಕು ಮೂಡಿಸುವ ಕಾರ್ಯವನ್ನು ಯುವ ವೇದಿಕೆಯವರು ಮಾಡಿದ್ದಾರೆ. ನೀಡಿದ ಉಡುಗೊರೆಯ ಮೌಲ್ಯಕ್ಕಿಂತ ಅದರ ಹಿಂದಿರುವ ಪ್ರೀತಿ, ಕಾಳಜಿ ಮತ್ತು ಮಾನವೀಯತೆ ದೊಡ್ಡದು. ನಾರಾಯಣ ಗುರುಗಳ ತತ್ವಾದರ್ಶಗಳನ್ನು ಕೇವಲ ಮಾತಿನಲ್ಲಿ ಸೀಮಿತಗೊಳಿಸದೆ ಇಂತಹ ಸಮಾಜಮುಖಿ ಕಾರ್ಯಗಳ ಮೂಲಕ ಅನುಷ್ಠಾನಗೊಳಿಸುತ್ತಿರುವುದು ಶ್ಲಾಘನೀಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿ ಯುವ ವೇದಿಕೆಗೆ ಶುಭ ಹಾರೈಸಿದರು.

ಬ್ರಹ್ಮಾವರ ಬಿಲ್ಲವ ಸಂಘದ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ ದೀಪಾವಳಿ ಶುಭಾಶಯ ಕೋರಿದರು. ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಸಚಿನ್ ಪೂಜಾರಿ ಹೇರೂರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುಶಾಂತ್ ಪೂಜಾರಿ, ಕೋಶಾಧಿಕಾರಿ ಚೇತನ್ ಪೂಜಾರಿ, ಬಿಲ್ಲವ ಸಂಘದ ಕಾರ್ಯದರ್ಶಿ ಶೇಖರ್ ಪೂಜಾರಿ, ಉಪಾಧ್ಯಕ್ಷರಾದ ರಾಜು ಪೂಜಾರಿ ಉಪ್ಪೂರು, ಅಶೋಕ್ ಪೂಜಾರಿ ಹಾರಾಡಿ, ರಾಘು ಪೂಜಾರಿ ಹೇರೂರು, ಜೊತೆ ಕಾರ್ಯದರ್ಶಿ ಅಶೋಕ್ ಪೂಜಾರಿ (ಇ), ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪೂಜಾರಿ ಹಂದಾಡಿ, ಶೈಲಾ, ಹೇಮಾ, ಬಾಲಕೃಷ್ಣ ಪೂಜಾರಿ, ಸೀತಾರಾಮ್ ಪೂಜಾರಿ, ಅಶೋಕ್ ಕಲ್ಕಾರ್ ಉಪಸ್ಥಿತರಿದ್ದರು.

ಬಿಲ್ಲವ ಯುವ ವೇದಿಕೆಯ ಸಚಿನ್ ಪೂಜಾರಿ ಕುಕ್ಕುಡೆ, ರಾಕೇಶ್ ಪೂಜಾರಿ, ಪ್ರತಾಪ್ ಪೂಜಾರಿ, ದೀಪು ಚಾಂತಾರು, ಕಿಶೋರ್ ವಾರಂಬಳ್ಳಿ, ನಿತ್ಯಾನಂದ ಪೂಜಾರಿ, ರಕ್ಷಿತ್ ಕುಂಬ್ರಗೋಡು, ಶಶಾಂಕ್ ಹೇರೂರು, ನಿಖಿಲ್ ಹೊನ್ನಾಳ, ರಮೇಶ್ ಪೂಜಾರಿ ಮತ್ತಿತರರು ಸಹಕರಿಸಿದರು. ಯುವ ವೇದಿಕೆಯ ಮಾಧ್ಯಮ ಸಂಚಾಲಕ ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿದರು.


