Monday, September 21, 2026

spot_img

ದನ ಕಳವು ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಉಡುಪಿ: ಮೇಯಲು ಬಿಟ್ಟಿದ್ದ ದನವನ್ನು ಕಳವು ಮಾಡಿ ಟೆಂಪೋದಲ್ಲಿ ಹಿಂಸಾತ್ಮಕವಾಗಿ ಕಟ್ಟಿಹಾಕಿ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಶಿರ್ವಾ ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಟೆಂಪೋ ಹಾಗೂ ದನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸೆ.19ರಂದು ಸಂಜೆ 4 ಗಂಟೆ ಸುಮಾರಿಗೆ ಕಳತ್ತೂರು ಗ್ರಾಮದ ನಡಿಗುತ್ತು ಎಂಬಲ್ಲಿ ವಸಂತಿ ಸುನೀತಾ ಕ್ವಾಡ್ರಸ್‌ ಅವರು ಮೇಯಲು ಬಿಟ್ಟಿದ್ದ ಐದು ದನಗಳ ಪೈಕಿ ಎರಡು ವರ್ಷ ಪ್ರಾಯದ ಕಪ್ಪು ಬಣ್ಣದ ದನವೊಂದು ಕಾಣೆಯಾಗಿತ್ತು. ಹುಡುಕಾಟ ನಡೆಸಿದಾಗ ಸಮೀಪದಲ್ಲಿ ನಿಂತಿದ್ದ ಕೆಎ 19 ಬಿ 5641 ನೋಂದಣಿ ಸಂಖ್ಯೆಯ ಟೆಂಪೋದಲ್ಲಿ ಕಾಣೆಯಾಗಿದ್ದ ದನ ಪತ್ತೆಯಾಗಿತ್ತು. ಅದರೊಂದಿಗೆ ಮತ್ತೊಂದು ದನವನ್ನು ಕೂಡ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಲಾಗಿತ್ತು. ಈ ವೇಳೆ ವಾಹನದ ಬಳಿ ದೂರುದಾರರಿಗೆ ಪರಿಚಯದ ಉಮ್ಮರಬ್ಬ ಸೇರಿದಂತೆ ನಾಲ್ವರು ಇದ್ದರು. ದೂರುದಾರರನ್ನು ಕಂಡ ತಕ್ಷಣ ಆರೋಪಿಗಳು ಟೆಂಪೋವನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದರು. ಈ ಕುರಿತು ಶಿರ್ವಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಮೊದಲ ಆರೋಪಿ ಉಮ್ಮರಬ್ಬ (64), ಕಳತ್ತೂರು ಗ್ರಾಮ, ಕಾಪು ತಾಲೂಕು, ಅವರನ್ನು ಸೆ.19ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮೊಹಮ್ಮದ್‌ ಶರೀಫ್‌ (31), ಶಂಶುದ್ದೀನ್‌ (57) ಹಾಗೂ ಮಹಮ್ಮದ್‌ ಆಸೀರ್‌ (24) ಎಂಬವರನ್ನು ಸೆ.20ರಂದು ಕಾಪುವಿನ ಕೊಪ್ಪಲಂಗಡಿ ಬಳಿ ವಾಹನ ಸಮೇತ ಪತ್ತೆಹಚ್ಚಿ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಟೆಂಪೋ ಹಾಗೂ ಕಳವು ಮಾಡಲಾಗಿದ್ದ ದನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಾದ 24 ಗಂಟೆಯೊಳಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್‌ ಅಧೀಕ್ಷಕಿ ಇಶಿತಾ ಗುಪ್ತ ಹಾಗೂ ಕಾಪು ಪೊಲೀಸ್‌ ವೃತ್ತ ನಿರೀಕ್ಷಕ ಅಝಮತ್‌ ಆಲಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಶಿರ್ವಾ ಠಾಣಾ ಪಿಎಸ್‌ಐ ಮಂಜುನಾಥ ಮರಬದ, ಪಡುಬಿದ್ರಿ ಠಾಣಾ ಪಿಎಸ್‌ಐ ಸಕ್ತಿವೇಲು ಇ., ಅನಿಲ್‌ ಕುಮಾರ್‌ ಟಿ. ನಾಯ್ಕ್‌, ಹೆಬ್ರಿ ಠಾಣಾ ಪಿಎಸ್‌ಐ ಲೋಹಿತ್‌ ಕುಮಾರ್‌ ಹಾಗೂ ಶಿರ್ವಾ, ಕಾಪು ಮತ್ತು ಪಡುಬಿದ್ರಿ ಠಾಣೆಗಳ ಸಿಬ್ಬಂದಿ, ಉಡುಪಿ ಜಿಲ್ಲಾ ಪೊಲೀಸ್‌ ಕಚೇರಿಯ ಸಿಡಿಆರ್‌ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles