Saturday, August 8, 2026

spot_img

ಡೇವಿಡ್ ಡಿಸೋಜ ಶೂಟೌಟ್‌ಗೆ ಯುಪಿಸಿಎಲ್ ಗುತ್ತಿಗೆ ವಿವಾದವೇ ಕೊಲೆಗೆ ಕಾರಣ; ಶೂಟರ್ ಖಾತೆಗೆ 2 ಲಕ್ಷಕ್ಕೂ ಅಧಿಕ ಹಣ ಪಾವತಿ

ಉಡುಪಿ : ಕಾಂಗ್ರೆಸ್ ಮುಖಂಡ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಶನಿವಾರ ಸುದ್ದಿಗೋಷ್ಠಿ ನಡೆಸಿ ಪ್ರಕರಣದ ಹಲವು ಮಹತ್ವದ ಸಂಗತಿಗಳನ್ನು ಬಹಿರಂಗಪಡಿಸಿದರು. ಯುಪಿಸಿಎಲ್ ಗುತ್ತಿಗೆಗೆ ಸಂಬಂಧಿಸಿದ ಆರ್ಥಿಕ ವ್ಯವಹಾರವೇ ಕೊಲೆಗೆ ಪ್ರಮುಖ ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ. ಸುಮಾರು ರೂ 2ರಿಂದ ರೂ 3 ಕೋಟಿ ಮೊತ್ತದ ವ್ಯವಹಾರಕ್ಕೆ ಸಂಬಂಧಿಸಿದಂತೆ ಡೇವಿಡ್ ಡಿಸೋಜ ಹಾಗೂ ಮತ್ತೋರ್ವ ಗುತ್ತಿಗೆದಾರನ ನಡುವೆ ವೈಮನಸ್ಸು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಭಾರತದ ವ್ಯಕ್ತಿಯೊಬ್ಬರು ಸುಪಾರಿ ನೀಡಿ ಕೊಲೆ ಮಾಡಿಸಿರುವ ಶಂಕೆ ವ್ಯಕ್ತವಾಗಿದ್ದು, ಸುಪಾರಿ ನೀಡಿದವರ ಪತ್ತೆಗಾಗಿ ಪೊಲೀಸ್ ತಂಡವೊಂದನ್ನು ಹೊರರಾಜ್ಯಕ್ಕೆ ಕಳುಹಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.

ಎ1 ಆರೋಪಿ ರಾಜು ಎಂಬಾತನ ಬ್ಯಾಂಕ್ ಖಾತೆಗೆ ರೂ2 ಲಕ್ಷಕ್ಕೂ ಅಧಿಕ ಹಣ ಪಾವತಿಯಾಗಿರುವುದು ಪತ್ತೆಯಾಗಿದೆ. ಕೊಲೆಗೂ ಮುನ್ನ ಹಾಗೂ ಕೃತ್ಯದ ಬಳಿಕ ಹಂತ ಹಂತವಾಗಿ ಹಣ ಪಾವತಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ರಾಜು 9 ಎಂಎಂ ಪಿಸ್ತೂಲಿನಿಂದ ಗುಂಡು ಹಾರಿಸಿ ಡೇವಿಡ್ ಡಿಸೋಜ ಅವರನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಉಡುಪಿ ಜಿಲ್ಲೆಯಿಂದ ಹೊರಹೋಗದಂತೆ ಜಿಲ್ಲೆಯ ಎಲ್ಲ ಗಡಿಭಾಗಗಳಲ್ಲಿ ನಾಕಾಬಂದಿ ಹಾಕಲಾಗಿತ್ತು. ಉಡುಪಿ ಹಾಗೂ ಭಟ್ಕಳ ರೈಲು ನಿಲ್ದಾಣಗಳಲ್ಲಿಯೂ ತೀವ್ರ ತಪಾಸಣೆ ನಡೆಸಲಾಗಿತ್ತು. ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ 500ಕ್ಕೂ ಅಧಿಕ ಪೊಲೀಸರು ಭಾಗವಹಿಸಿದ್ದರು. ರೈಲ್ವೆ ಪೊಲೀಸರ ಹಾಗೂ ಉತ್ತರ ಕನ್ನಡ ಜಿಲ್ಲಾ ಪೊಲೀಸರ ಸಹಕಾರ ಪಡೆಯಲಾಗಿತ್ತು.

ಬೈಂದೂರಿನ ಒತ್ತಿನೆಣೆ ಬಳಿ ಬಸ್ ತಪಾಸಣೆ ನಡೆಸುತ್ತಿದ್ದ ಪೊಲೀಸರನ್ನು ಕಂಡು ಮೂವರು ಆರೋಪಿಗಳು ಬಸ್‌ನಿಂದ ಇಳಿದು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಎ1 ಆರೋಪಿ ರಾಜುವನ್ನು ಕಾಪು ಠಾಣೆಯ ಪಿಎಸ್‌ಐ ತೇಜಸ್ವಿ ಬೆನ್ನಟ್ಟಿದ್ದರು. ಒತ್ತಿನೆಣೆ ಬಳಿ ರಾಜು ಪಿಎಸ್‌ಐ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ. ಗಾಯಗೊಂಡ ಪಿಎಸ್‌ಐ ತೇಜಸ್ವಿ ಹಾಗೂ ಆರೋಪಿ ರಾಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಇಬ್ಬರು ಆರೋಪಿಗಳನ್ನು ಶನಿವಾರ ಬೆಳಗ್ಗೆ ಭಟ್ಕಳ ಹಾಗೂ ಕುಮಟಾದಲ್ಲಿ ಬಂಧಿಸಲಾಗಿದೆ.

ಎ1 ಆರೋಪಿ ರಾಜು ವಿರುದ್ಧ ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ ಐದು ರಾಜ್ಯಗಳಲ್ಲಿ ಕೊಲೆ, ಮಹಿಳೆಯರ ಮೇಲೆ ಹಲ್ಲೆ ಹಾಗೂ ದರೋಡೆ ಸೇರಿದಂತೆ 26 ಪ್ರಕರಣಗಳು ದಾಖಲಾಗಿವೆ. ಎ2 ಆರೋಪಿ ಅನಮೋಲ್ ವಿರುದ್ಧ 2018ರ ಬಳಿಕ ನಾಲ್ಕು ರಾಜ್ಯಗಳಲ್ಲಿ ಎಂಟು ಪ್ರಕರಣಗಳಿವೆ. ಮತ್ತೊಬ್ಬ ಆರೋಪಿ ಜಿಯಾವುಲ್ ವಜುಲ್ ಶೇಖ್ ವಿರುದ್ಧ ದರೋಡೆ, ಶೂಟೌಟ್ ಹಾಗೂ ಡಕಾಯಿತಿ ಸೇರಿದಂತೆ 12 ಪ್ರಕರಣಗಳಿವೆ ಎಂದು ಎಸ್ಪಿ ಮಾಹಿತಿ ನೀಡಿದರು.ರಾಜುವಿನಿಂದ ಕೃತ್ಯಕ್ಕೆ ಬಳಸಿದ 9 ಎಂಎಂ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ಮೂರು ಮೊಬೈಲ್ ಫೋನ್‌ಗಳು ಹಾಗೂ ಸಿಮ್ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಎರ್ಮಾಳ್ ಬಳಿ ಬೈಕ್ ಬಿಟ್ಟು ಹೋಗಿದ್ದು, ಬೈಕ್ ಒದಗಿಸಿದವರು ಯಾರು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಆರೋಪಿಗಳು ಕೃತ್ಯಕ್ಕೂ ಸುಮಾರು ಎರಡು ತಿಂಗಳ ಮುನ್ನ ಸ್ಥಳಕ್ಕೆ ಆಗಮಿಸಿ ಕೊಲೆಗೆ ಸ್ಕೆಚ್ ಹಾಕಿದ್ದರು. ಸ್ಥಳೀಯವಾಗಿ ಯಾರಾದರೂ ಆರೋಪಿಗಳಿಗೆ ನೆರವು ನೀಡಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಮೂವರು ಆರೋಪಿಗಳು ಪರಸ್ಪರ ಹೆಚ್ಚು ಪರಿಚಿತರಾಗಿರಲಿಲ್ಲ. ಸುಳ್ಳು ಹೆಸರುಗಳನ್ನು ಹೇಳಿಕೊಂಡು ಪರಿಚಯ ಮಾಡಿಕೊಂಡಿದ್ದರು ಎನ್ನಲಾಗಿದೆ. ಪ್ರತ್ಯೇಕ ಬಸ್‌ಗಳಲ್ಲಿ ಪ್ರಯಾಣಿಸಿ, ಮಧ್ಯದಲ್ಲಿ ರೈಲಿಗೆ ಬದಲಾಗುವ ಮೂಲಕ ಪೊಲೀಸರ ಕಣ್ತಪ್ಪಿಸಲು ಆರೋಪಿಗಳು ಯೋಜನೆ ರೂಪಿಸಿದ್ದರು. ಆರೋಪಿಗಳು ಬೇರೆ ಬೇರೆ ರಾಜ್ಯಗಳ ವೃತ್ತಿಪರ ಹಂತಕರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದ ಸುಪಾರಿ ದಾರರು, ಸ್ಥಳೀಯ ಸಹಾಯಗಾರರು ಹಾಗೂ ಬೈಕ್ ಒದಗಿಸಿದವರ ಪತ್ತೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles