ಉಡುಪಿ: ಉಡುಪಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮಾಸಿಕ ಸಭೆಯು ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ಅ. 14ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯಲಕ್ಷ್ಮೀ ಹಾಗೂ ವ್ಯವಸ್ಥಾಪಕಿ ಮತ್ತು ಸಹಾಯಕ ನಿರ್ದೇಶಕಿ ಫರ್ಝಾನಾ ಎಂ. ಉಪಸ್ಥಿತರಿದ್ದರು.

ಸಭೆಯಲ್ಲಿ ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳ ಅನುಷ್ಠಾನದ ಕುರಿತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಐದು ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ ಇದುವರೆಗೆ ವಿತರಿಸಲಾದ ಸೌಲಭ್ಯಗಳು, ಫಲಾನುಭವಿಗಳ ವಿವರಗಳು ಹಾಗೂ ಯೋಜನೆಗಳ ಅನುಷ್ಠಾನದಲ್ಲಿ ಎದುರಾಗುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

ಸಮಿತಿಯ ಸದಸ್ಯರು ಹಾಗೂ ಗೃಹಲಕ್ಷ್ಮೀ ಸ್ವಸಹಾಯ ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿ, ಐದು ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು. ಸಾರ್ವಜನಿಕರ ಕುಂದುಕೊರತೆಗಳ ಕುರಿತು ಚರ್ಚಿಸಿ, ವಿವಿಧ ಇಲಾಖೆಗಳ ಮೂಲಕ ಎಷ್ಟು ಮೊತ್ತದ ಅನುದಾನ ಬಿಡುಗಡೆಯಾಗಿದೆ ಎಂಬ ವಿವರಗಳನ್ನೂ ಅಧಿಕಾರಿಗಳಿಂದ ಪಡೆದುಕೊಂಡರು.



