ಉಡುಪಿ : ಕೇರಳ ಸಮಾಜಂ (ರಿ) ಉಡುಪಿ ಇದರ ವಾರ್ಷಿಕ ಮಹಾಸಭೆ ಭಾನುವಾರ ಅಂಬಾಗಿಲಿನ ಅಮೃತ ಗಾರ್ಡನ್‌ನಲ್ಲಿ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ 2025–26ನೇ ಸಾಲಿನ ಸಂಘದ ಕಾರ್ಯಚಟುವಟಿಕೆಗಳ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಮಂಡಿಸಿದರು. ಇದೇ ಅವಧಿಯ ಲೆಕ್ಕ ಪರಿಶೋಧಕರಿಂದ ಅಂಗೀಕರಿಸಲ್ಪಟ್ಟ ವಾರ್ಷಿಕ ಲೆಕ್ಕಪತ್ರಗಳನ್ನು ಖಜಾಂಚಿ ರಮೇಶ್ ಇ.ಪಿ. ಸಭೆಯ ಮುಂದಿಟ್ಟರು. ಬಳಿಕ ಮಹಾಸಭೆಯಲ್ಲಿ ವರದಿ ಹಾಗೂ ಲೆಕ್ಕಪತ್ರಗಳಿಗೆ ಸದಸ್ಯರಿಂದ ಅನುಮೋದನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಅರುಣ್ ಕುಮಾರ್, ಸಂಘವು ಕಳೆದ ಸಾಲಿನಲ್ಲಿ ಕೈಗೊಂಡ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸೇವಾ ಚಟುವಟಿಕೆಗಳ ಕುರಿತು ವಿವರಿಸಿದರು. ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿಗೆ ಕೈಗೊಳ್ಳಲಿರುವ ಹಲವು ಕಾರ್ಯಕ್ರಮಗಳು ಮತ್ತು ಯೋಜನೆಗಳ ಕುರಿತೂ ಮಾಹಿತಿ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಇಂದಿರಾ ಸಂತೋಷ್ ಪ್ರಾರ್ಥನೆಗೈದರು. ನಿರ್ಮಲ್ಜಿತ್ ಸ್ವಾಗತಿಸಿದರು. ಮೋಬಿ ವಂದಿಸಿದರು. ಶ್ರೀದೇವಿ ಅರುಣ್ ಕಾರ್ಯಕ್ರಮ ನಿರೂಪಿಸಿದರು. ಮಹಾಸಭೆಯಲ್ಲಿ ಕೇರಳ ಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.



