ಉಡುಪಿ : ನೀಟ್ ಪ್ರಶ್ನಾಪತ್ರಿಕೆ ಸೋರಿಕೆ ಪ್ರಕರಣ ಖಂಡಿಸಿ ಎಸ್‌ಐಒ ಹಾಗೂ ಜಿಐಒ ಉಡುಪಿ ಜಿಲ್ಲಾ ಘಟಕಗಳ ವತಿಯಿಂದ ಸೋಮವಾರ ಉಡುಪಿ ನಗರದ ಜಟ್ಕಾ ಸ್ಟ್ಯಾಂಡ್ ಬಳಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಣ ತಜ್ಞ ಪ್ರೊ. ಫಣಿರಾಜ್, ನೀಟ್ ಪ್ರಶ್ನಾಪತ್ರಿಕೆ ಸೋರಿಕೆ ವಿದ್ಯಾರ್ಥಿಗಳ ಕನಸುಗಳ ಮೇಲಿನ ದಾಳಿಯಾಗಿದೆ ಎಂದು ಆರೋಪಿಸಿದರು.

ಈ ಹಗರಣಕ್ಕೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ನೇರ ಹೊಣೆ ಹೊತ್ತುಕೊಳ್ಳಬೇಕು. ಕೇಂದ್ರ ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ನೀಟ್ ಪರೀಕ್ಷಾ ವ್ಯವಸ್ಥೆಯಿಂದ ವೈದ್ಯಕೀಯ ಶಿಕ್ಷಣ ವ್ಯಾಪಾರೀಕರಣಗೊಂಡಿದ್ದು, ಕೋಚಿಂಗ್ ಕೇಂದ್ರಗಳ ಮಾಫಿಯಾಗೆ ಉತ್ತೇಜನ ಸಿಕ್ಕಿದೆ ಎಂದು ಟೀಕಿಸಿದ ಅವರು, ದೇಶದಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕೋಚಿಂಗ್ ಉದ್ಯಮ ಬೆಳೆಯುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಆರ್ಥಿಕ ಮತ್ತು ಮಾನಸಿಕ ಒತ್ತಡ ಎದುರಿಸುತ್ತಿದ್ದಾರೆ. ಕೇಂದ್ರಿಕೃತ ಪರೀಕ್ಷಾ ವ್ಯವಸ್ಥೆಯ ವೈಫಲ್ಯವೇ ಈ ರೀತಿಯ ಹಗರಣಗಳಿಗೆ ಕಾರಣವಾಗಿದೆ. ನೀಟ್ ವ್ಯವಸ್ಥೆಯನ್ನು ಮರುಪರಿಶೀಲಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಎಸ್‌ಐಒ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ನಿಹಾಲ್ ಕಿದಿಯೂರು ಮಾತನಾಡಿ, ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಮಾನವೀಯತೆ ಮತ್ತು ಮೌಲ್ಯ ಶಿಕ್ಷಣದ ಕೊರತೆ ಕಂಡು ಬರುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಹಾಳು ಮಾಡುತ್ತಿದ್ದು, ಶಿಕ್ಷಣ ವ್ಯವಸ್ಥೆಯನ್ನು ಮಾನವೀಯ ಮೌಲ್ಯಾಧಾರಿತವಾಗಿ ರೂಪಿಸಬೇಕಾಗಿದೆ ಎಂದರು.

ಡಾ. ಡಾ. ನಸುಹಾ ಮಾತನಾಡಿ, ನೀಟ್ ಪ್ರಶ್ನಾಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಎಸ್‌ಐಒ ಜಿಲ್ಲಾಧ್ಯಕ್ಷ ಆಯಾನ್ ಮಲ್ಪೆ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.



