ಉಡುಪಿ : ಕುಂದಾಪುರದಲ್ಲಿ ಉದ್ಯಮಿ ಐವಾನ್ ರಿಚರ್ಡ್ ಮಸ್ಕರೇನಸ್ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಡೇರಿಕ್ ಕ್ರಾಸ್ತನನ್ನು ಉಡುಪಿ ಜಿಲ್ಲಾ ಪೊಲೀಸರು ಕೇವಲ 24 ಗಂಟೆಗಳೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶುಕ್ರವಾರ ಮುಂಜಾನೆ ಕುಂದಾಪುರದ ಹೋಲಿ ರೋಜಾರಿಯೋ ಚರ್ಚ್ ರಸ್ತೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವಾನ್ ರಿಚರ್ಡ್ ಮಸ್ಕರೇಸ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಘಟನೆ ಬಳಿಕ ಆರೋಪಿ ಡೇರಿಕ್ ಸ್ಥಳದಿಂದ ಪರಾರಿಯಾಗಿದ್ದರಿಂದ ಪ್ರಕರಣ ಕರಾವಳಿಯಲ್ಲಿ ಭಾರೀ ಸಂಚಲನ ಮೂಡಿಸಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಉಡುಪಿ ಪೊಲೀಸರು ಆರೋಪಿಯ ಬಂಧನಕ್ಕಾಗಿ ಮೂರು ವಿಶೇಷ ತಂಡಗಳನ್ನು ರಚಿಸಿ ಉಡುಪಿ, ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ್ದರು. ತನಿಖೆಯ ವೇಳೆ ದೊರೆತ ಸುಳಿವಿನ ಆಧಾರದ ಮೇಲೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಬೆಳಕೆ ಗ್ರಾಮದ ಹೇರಬುಡಿಕೆ ಪ್ರದೇಶದಲ್ಲಿ ಅಡಗಿದ್ದ ಡೇರಿಕ್ ಕ್ರಾಸ್ತನನ್ನು ಬಂಧಿಸಲಾಯಿತು.

ಬಂಧಿತ ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಶನಿವಾರ ಸಂಜೆ ವೇಳೆಗೆ ಡೇರಿಕ್ನನ್ನು ಹತ್ಯೆ ನಡೆದ ಕುಂದಾಪುರದ ಹೋಲಿ ರೋಜಾರಿಯೋ ಚರ್ಚ್ ರಸ್ತೆಯ ಘಟನೆ ಸ್ಥಳಕ್ಕೆ ಕರೆತಂದು ಮಹಜರು ನಡೆಸಿದರು. ಘಟನೆಯ ವೇಳೆ ನಡೆದ ಬೆಳವಣಿಗೆಗಳು, ಆರೋಪಿಯ ಚಲನವಲನ, ಗುಂಡು ಹಾರಿಸಿದ ಸ್ಥಳ ಸೇರಿದಂತೆ ವಿವಿಧ ಅಂಶಗಳ ಕುರಿತು ಸ್ಥಳ ಪರಿಶೀಲನೆ ನಡೆಸಿ ಮಹತ್ವದ ಮಾಹಿತಿ ಸಂಗ್ರಹಿಸಿದರು.

ಪ್ರಕರಣದಲ್ಲಿ ಬಳಸಿದ ಶಸ್ತ್ರಾಸ್ತ್ರದ ಪತ್ತೆ, ಪರಾರಿಯಾದ ಮಾರ್ಗ, ಹತ್ಯೆಗೆ ಕಾರಣವಾದ ಹಿನ್ನೆಲೆ ಹಾಗೂ ಇತರ ಸಾಕ್ಷ್ಯಾಧಾರಗಳ ಬಗ್ಗೆ ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಕೇವಲ 24 ಗಂಟೆಗಳಲ್ಲೇ ಆರೋಪಿಯನ್ನು ಬಂಧಿಸಿ, ಬಳಿಕ ಘಟನೆ ಸ್ಥಳದಲ್ಲಿ ಮಹಜರು ನಡೆಸಿರುವುದು ಉಡುಪಿ ಜಿಲ್ಲಾ ಪೊಲೀಸರ ತ್ವರಿತ ಮತ್ತು ಪರಿಣಾಮಕಾರಿ ಕಾರ್ಯಾಚರಣೆಗೆ ಸಾಕ್ಷಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿ ವಿಚಾರಣೆ ಪೂರ್ಣಗೊಂಡ ಬಳಿಕ ಪೊಲೀಸರು ಬಹಿರಂಗಪಡಿಸುವ ಸಾಧ್ಯತೆ ಇದೆ.


