ಉಡುಪಿ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿವಿಧ ಆಡಳಿತಾತ್ಮಕ ನಿರ್ಧಾರಗಳು ಹಾಗೂ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಖಂಡಿಸಿ ಕಾರ್ಕಳ ಬಿಜೆಪಿ ಮಂಡಲದ ವತಿಯಿಂದ ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು. ಮಾಜಿ ಸಚಿವ ಹಾಗೂ ಶಾಸಕ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸುನಿಲ್ ಕುಮಾರ್, ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಜನವಿರೋಧಿ ಆಡಳಿತವಿದೆ ಎಂದು ಆರೋಪಿಸಿದರು. ನಾಲ್ಕು ಬಜೆಟ್ಗಳನ್ನು ಮಂಡಿಸಿದ ಬಳಿಕವೂ ಸಾಮಾನ್ಯ ಜನರ ಸಂಕಷ್ಟಕ್ಕೆ ಸೂಕ್ತ ಪರಿಹಾರ ದೊರೆತಿಲ್ಲ. ನಾಲ್ಕು ವರ್ಷಗಳು ಕಳೆಯುತ್ತಿದ್ದರೂ ಒಂದೇ ಒಂದು ಹೊಸ ಪಡಿತರ ಚೀಟಿಯನ್ನು ನೀಡಿಲ್ಲ ಎಂದು ದೂರಿದರು.

ಮತ್ತೊಂದೆಡೆ ಬಿಪಿಎಲ್ ಪಡಿತರ ಚೀಟಿಗಳ ಪರಿಶೀಲನೆ ಹೆಸರಿನಲ್ಲಿ ಸಾವಿರಾರು ಕಾರ್ಡ್ಗಳನ್ನು ರದ್ದುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಉಡುಪಿಯಲ್ಲಿ 6 ಸಾವಿರಕ್ಕೂ ಅಧಿಕ ಬಿಪಿಎಲ್ ಕಾರ್ಡ್ಗಳನ್ನು ಬಂದ್ ಮಾಡಲಾಗಿದೆ ಎಂದು ಅವರು ಆರೋಪಿಸಿದರು. ಅರ್ಹ ಬಡವರಿಗೆ ಹೊಸ ಪಡಿತರ ಚೀಟಿ ನೀಡುವ ಬದಲು ಈಗಿರುವ ಕಾರ್ಡ್ಗಳನ್ನು ರದ್ದುಪಡಿಸುತ್ತಿರುವುದು ಏಕೆ ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಇದೇ ವಿಚಾರವನ್ನು ಪ್ರತಿಭಟನೆಯ ಪ್ರಮುಖ ಬೇಡಿಕೆಗಳಲ್ಲೊಂದಾಗಿ ಬಿಜೆಪಿ ಮುಂದಿಟ್ಟಿದೆ.

ಕಳೆದ ಏಳು–ಎಂಟು ತಿಂಗಳಿಂದ ವಯೋವೃದ್ಧರು ಸೇರಿದಂತೆ ಫಲಾನುಭವಿಗಳಿಗೆ ಮಾಸಾಶನ ಸಿಗುತ್ತಿಲ್ಲ ಎಂದು ಆರೋಪಿಸಿದ ಅವರು, ಉಡುಪಿ ಜಿಲ್ಲೆಯಲ್ಲಿ 47,477 ಮಂದಿಯ ಪಿಂಚಣಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು. ಗೃಹಲಕ್ಷ್ಮಿ ಯೋಜನೆಯಲ್ಲೂ ಪರಿಷ್ಕರಣೆ ಹೆಸರಿನಲ್ಲಿ ಎಷ್ಟು ಮಂದಿಯನ್ನು ಕೈಬಿಡಲಾಗುತ್ತಿದೆ ಎಂಬುದಕ್ಕೆ ಸರ್ಕಾರ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯಕ್ಕೆ ಎಷ್ಟು ವಸತಿ ಯೋಜನೆಗಳು ಬಂದಿವೆ ಎಂಬುದನ್ನು ಕಾಂಗ್ರೆಸ್ ನಾಯಕರು ಬಹಿರಂಗಪಡಿಸಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಕಲ್ಲು, ಮಣ್ಣು, ಮರಳು ಲಭ್ಯವಿತ್ತು. ಆದರೆ ಈಗ ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ಏಕಾಏಕಿ ಏರಿಕೆಯಾಗಿದೆ ಎಂದು ಸುನಿಲ್ ಕುಮಾರ್ ಆರೋಪಿಸಿದರು. ಕೇಂದ್ರ ಸರ್ಕಾರದ ಯೋಜನೆಗಳಿಗೆ ಯಾವುದೇ ಸರ್ವರ್ ಸಮಸ್ಯೆ ಇಲ್ಲದಿದ್ದರೂ ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಮಾತ್ರ ಪದೇಪದೆ ಸರ್ವರ್ ಸಮಸ್ಯೆ ಎದುರಾಗುತ್ತಿರುವುದೇಕೆ ಎಂದು ಪ್ರಶ್ನಿಸಿದ ಅವರು, ಸರ್ಕಾರದ ಆಡಳಿತ ವೈಫಲ್ಯದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಬಗರ್ಹುಕುಂ ಅರ್ಜಿಗಳ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಸಾವಿರಾರು ಅರ್ಜಿಗಳು ತಿರಸ್ಕೃತವಾಗುತ್ತಿವೆ. ಅರ್ಜಿಗಳು ತಿರಸ್ಕೃತವಾದರೆ ಬಡವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು. ವಿದ್ಯುತ್ ಕಡಿತದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿ, ಗ್ರಾಮೀಣ ಭಾಗದಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ ಎಂದು ಹೇಳಿದರು. ಜನರ ಗಮನವನ್ನು ಬೇರೆಡೆ ಸೆಳೆಯಲು ಎಸ್ಐಆರ್ ಹಾಗೂ ವಂದೇ ಮಾತರಂ ವಿಚಾರಗಳನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ ಎಂದು ಸುನಿಲ್ ಕುಮಾರ್ ಆರೋಪಿಸಿದರು. ರಾಜ್ಯ ಸರ್ಕಾರವನ್ನು ಬೀಳಿಸುವ ಉದ್ದೇಶ ಬಿಜೆಪಿಗೆ ಇಲ್ಲ. ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಸರ್ಕಾರ ವಿಸರ್ಜಿಸಿ ಚುನಾವಣೆಗೆ ಬನ್ನಿ ಎಂದು ಅವರು ಸವಾಲು ಹಾಕಿದರು.

ಜನರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಸುನಿಲ್ ಕುಮಾರ್ ತಿಳಿಸಿದರು. ಅ.26ರಂದು ಉಡುಪಿಯಲ್ಲಿ ರಾತ್ರಿ–ಹಗಲು ಪ್ರತಿಭಟನೆ ನಡೆಸುವುದಾಗಿ ಘೋಷಿಸಿದರು. ಪ್ರತಿಭಟನೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಜಿಲ್ಲಾ ಬಿಜೆಪಿ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.


